ಹನಕೆರೆಯಲ್ಲಿ ದೇವಸ್ಥಾನ ಪ್ರವೇಶಿಸಿದ ದಲಿತರು: ಉತ್ಸವಮೂರ್ತಿ ತೆಗೆದುಕೊಂಡು ಹೋದ ಯುವಕರು

Temple dispute in Hanakere village Mandya
Published on

ಮಂಡ್ಯ: ತಾಲೂಕಿನ ಹನಕೆರೆ ಗ್ರಾಮದಲ್ಲಿ ಭಾನುವಾರ ಕೆಲ ಸವರ್ಣೀಯರ ವಿರೋಧದ ನಡುವೆ ಅಧಿಕಾರಿಗಳ ಸಮ್ಮುಖದಲ್ಲಿ ದಲಿತ ಸಮುದಾಯವರು ಕಾಲಭೈರವೇಶ್ವರ ಸ್ವಾಮಿ ದೇವಾಲಯಕ್ಕೆ ಪ್ರವೇಶ ಮಾಡಿ ಪೂಜೆ ಸಲ್ಲಿಸಿದರು.

ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರ ರಕ್ಷಣೆಯಲ್ಲಿ ದಲಿತರು ದೇವಾಲಯ ಪ್ರವೇಶಿಸಿ ಪೂಜೆ ಸಲ್ಲಿಸಿದರು. ಇದರಿಂದ ಆಕ್ರೋಶಗೊಂಡ ಕೆಲವರು ಅಸಮಾಧಾನ ವ್ಯಕ್ತಪಡಿಸಿ, ನಾಮಫಲಕದ ಕಲ್ಲನ್ನು ದೇವಾಲಯದ ಎದುರು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಮಾತ್ರವಲ್ಲದೆ ದೇವರ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಮಹದೇಶ್ವರ ದೇವಾಲಯದಲ್ಲಿಟ್ಟರು.

ಏನಿದು ವಿವಾದ?: ಹನಕೆರೆ ಗ್ರಾಮದ ಕಾಲಭೈರವೇಶ್ವರಸ್ವಾಮಿ ದೇವಸ್ಥಾನವನ್ನು ಅಂದಾಜು 1.5 ಕೋಟಿ ರೂ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಲಾಗಿತ್ತು. ಕಳೆದ ಎರಡು ತಿಂಗಳಿಂದಲೂ ದೇವಾಲಯ ಪ್ರವೇಶಕ್ಕೆ ದಲಿತ ಸಮುದಾಯದವರು ಪ್ರಯತ್ನ ನಡೆಸಿದ್ದರು. ಆದರೆ ಕೆಲವರು ಇದಕ್ಕೆ ಅವಕಾಶ ನೀಡಿರಲಿಲ್ಲ. ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಎಸ್ಸಿ, ಎಸ್ಟಿ ಸಮುದಾಯದವರ ಕುಂದುಕೊರತೆ ಸಭೆಯಲ್ಲಿ ಹನಕೆರೆ ದೇವಾಲಯದ ಪ್ರವೇಶ ವಿವಾದ ಕುರಿತು ದಲಿತ ಮುಖಂಡರು ಗಮನ ಸೆಳೆದಿದ್ದರು. ಇದಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳಿಂದ ಮಾಹಿತಿ ಕೇಳಿದ್ದರು ಎನ್ನಲಾಗಿದೆ. ಅದರಂತೆ ಗ್ರಾಮದಲ್ಲಿ ಅಧಿಕಾರಿಗಳ ತಂಡವು ಶಾಂತಿ ಸಭೆ ನಡೆಸಿ ಮನವೊಲಿಸಲು ಮುಂದಾದರೂ ಅದು ಫಲಿಸಲಿಲ್ಲ.

ನಂತರ ದಿನಗಳಲ್ಲಿ ಮಾಜಿ ಶಾಸಕ ಎಂ.ಶ್ರೀನಿವಾಸ್ ಅವರ ನೇತೃತ್ವದಲ್ಲಿ ಸಭೆ ನಡೆಸಿ ಮನವೊಲಿಸಲು ಮುಂದಾದರೂ ಪ್ರಯೋಜನವಾಗಿರಲಿಲ್ಲ. ದಲಿತ ಸಮುದಾಯದವರಿಗಾಗಿಯೇ ಪ್ರತ್ಯೇಕವಾಗಿ ಎರಡು ದೇವಾಲಯ ನಿರ್ಮಿಸಿಕೊಡಲಾಗಿದೆ ಎಂದು ಆಕ್ಷೇಪಿಸಿದ್ದರು. ಈ ನಡುವೆ ಶನಿವಾರ ರಾತ್ರಿ ದೇಗುಲ ಪ್ರವೇಶಕ್ಕೆ ಮುಂದಾದ ದಲಿತರನ್ನು ಕೆಲ ಸವರ್ಣೀಯರು ತಡೆದರು. ಇದು ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯ. ಯಾರು ಬೇಕಾದರೂ ದೇವಾಲಯ ಪ್ರವೇಶಿಸಬಹುದು. ಅದರಂತೆ ದಲಿತರ ಪ್ರವೇಶಕ್ಕೆ ಅವಕಾಶ ಕೊಡುವಂತೆ ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕಡಿಯೊಂದಿಗೆ ಪೊಲೀಸ್ ಬಂದೋಬಸ್ತ್ ಮಾಡಿ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿತ್ತು.

ಭಾನುವಾರ ದೇವಾಲಯ ಪ್ರವೇಶ ಮಾಡಲೇಬೇಕೆಂದು ಪಟ್ಟು ಹಿಡಿದರು. ಈ ವೇಳೆ ತಹಸೀಲ್ದಾರ್ ಮಾತನಾಡಿ, ಇದು ಮುಜರಾಯಿ ಇಲಾಖೆಗೆ ಸೇರಿದ ದೇವಾಲಯ. ಎಲ್ಲ ಜಾತಿ, ಧರ್ಮ, ಜನಾಂಗದವರ ಪ್ರವೇಶಕ್ಕೆ ಮುಕ್ತವಾಗಿರುವುದರಿಂದ ಅಡ್ಡಿಪಡಿಸುವುದು ಸರಿಯಲ್ಲ. ಒಂದು ವೇಳೆ ವಿರೋಧಿಸಿದರೆ ಕಾನೂನಾತ್ಮಕವಾಗಿ ಕ್ರಮ ಜರುಗಿಸಬೇಕಾಗುತ್ತದೆ. ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರೂ ಲಿಸಲಿಲ್ಲ. ಕಷ್ಟಪಟ್ಟು ಕೂಲಿ ಮಾಡಿದ ಹಣದಲ್ಲಿ ದೇವಾಲಯ ನಿರ್ಮಾಣ ಮಾಡಿದ್ದೇವೆ. ದಲಿತ ಸಮುದಾಯದವರಿಗಾಗಿಯೇ ಚಿಕ್ಕಮ್ಮ ಮತ್ತು ಮಂಚಮ್ಮ ದೇವಸ್ಥಾನ ಕಟ್ಟಿಸಿಕೊಡಲಾಗಿದೆ. ಈಗ ಏಕಾಏಕಿ ಕಾಲಭೈರವೇಶ್ವರಸ್ವಾಮಿ ದೇಗುಲ ಪ್ರವೇಶಿಸಿಸಿ ನಾವು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದ ಸಂಪ್ರದಾಯ ಮುರಿದಿದ್ದಾರೆ ಎಂದು ಅಧಿಕಾರಿಗಳು ಮತ್ತು ಪೊಲೀಸರ ಜೊತೆ ವಾಗ್ವಾದಕ್ಕಿಳಿದರು. ಆದರೆ ಅಂತಿಮವಾಗಿ ಅಧಿಕಾರಿಗಳ ಸಮ್ಮುಖದಲ್ಲಿ ದಲಿತ ಸಮುದಾಯದವರನ್ನು ದೇವಸ್ಥಾನದೊಳಕ್ಕೆ ಕರೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ಇನ್ನು ಗ್ರಾಮದಲ್ಲಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡಂತಿರುವುದರಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾಲಭೈರವೇಶ್ವರ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಲು ಎಲ್ಲ ವರ್ಗದವರು ದೇಣಿಗೆ ನೀಡಿದ್ದಾರೆ. ಈಗ ಪ್ರವೇಶ ನಿರಾಕರಿಸುತ್ತಿರುವುದು ಸರಿಯಲ್ಲ. ನಾವು ಮನುಷ್ಯರು, ಆದ್ದರಿಂದ ದೇವಾಲಯ ಪ್ರವೇಶಕ್ಕೆ ಅಧಿಕಾರಿಗಳು ಮತ್ತು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ನಾವೆಲ್ಲರೂ ಶಾಂತಿಯನ್ನು ಬಯಸುತ್ತೇವೆ ಎಂದು ದೇವಾಲಯ ಪ್ರವೇಶ ಮಾಡಿದ ದಲಿತ ಸಮುದಾಯದ ಯುವಕರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net