ಮ.ಬೆಟ್ಟದಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

09 HANUR 2
Published on

ಹನೂರು: ಮಾದಪ್ಪನ ದೇಗುಲಕ್ಕೆ ಭಕ್ತರು ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಿಗೆ ಪ್ರವೇಶ ನಿಷೇಧಿಸುವಂತೆ ಒತ್ತಾಯಿಸಿ ಗುರುವಾರ ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ರೈತ, ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.


ಮ.ಬೆಟ್ಟದ ಮಹದೇಶ್ವರ ಪ್ರೌಢಶಾಲೆ ಆವರಣದಲ್ಲಿ ಜಮಾಯಿಸಿದ್ದ ಸಾವಿರಕ್ಕೂ ಹೆಚ್ಚು ಪ್ರತಿಭಟನಾಕಾರರು ಮೆರವಣಿಗೆ ಮೂಲಕ ಬಸ್ ನಿಲ್ದಾಣಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗಿದರು.


ಬಳಿಕ ಕೊಳ್ಳೇಗಾಲದಿಂದ ಮ.ಬೆಟ್ಟಕ್ಕೆ ಪ್ರವೇಶಿಸುವ ಮುಖ್ಯದ್ವಾರದ ಚೆಕ್‌ಪೋಸ್ಟ್ ಬಳಿ ಧರಣಿ ಕುಳಿತರು. ಈ ವೇಳೆ ಜಿಲ್ಲಾಧಿಕಾರಿ, ಸಂಬಂಧಪಟ್ಟ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟುಹಿಡಿದರು. ಸುದ್ದಿ ತಿಳಿದು ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಹಾಗೂ ತಹಸೀಲ್ದಾರ್ ಬಸವರಾಜು ಚಿಗರಿ ಸ್ಥಳಕ್ಕೆ ಆಗಮಿಸಿದರು.


ಈ ವೇಳೆ ಪ್ರತಿಭಟನಕಾರರು ಮಾತನಾಡಿ, ದೇಶದಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ಹಸಿರು ವಲಯ ಎನಿಸಿಕೊಂಡಿದ್ದ ಚಾ.ನಗರ ಜಿಲ್ಲೆಗೂ ವಕ್ಕರಿಸಿದ್ದು, ದಿನೇದಿನೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಆದರೆ ತಾಲೂಕಿನ ಧಾರ್ಮಿಕ ಯಾತ್ರಾ ಸ್ಥಳ ಮಾದಪ್ಪನ ಸನ್ನಿಧಿಗೆ ಭಕ್ತರಿಗೆ ಅವಕಾಶ ಕಲ್ಪಿಸಿರುವ ಹಿನ್ನೆಲೆ ಕಳೆದ ತಿಂಗಳಿನಿಂದ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಿದ್ದಾರೆ. ಇದರಿಂದ ಈ ಭಾಗದ ಜನರಿಗೆ ಕರೊನಾ ಸೋಂಕು ತಗುಲುವ ಭೀತಿ ಮನೆ ಮಾಡಿದೆ. ಆದ್ದರಿಂದ ದೇಗುಲವನ್ನು ಬಂದ್ ಮಾಡುವುದರ ಮೂಲಕ ಭಕ್ತರಿಗೆ ಪ್ರವೇಶ ನಿಷೇಧಿಸಬೇಕು. ಅಲ್ಲದೆ ಮ.ಬೆಟ್ಟಕ್ಕೆ ಬರುವ ಭಕ್ತರನ್ನು ತಾಳುಬೆಟ್ಟದಲ್ಲಿಯೇ ತಡೆಯಬೇಕು. ಹಾಗೆಯೇ ಮ.ಬೆಟ್ಟದ ಸುತ್ತಮುತ್ತಲ ಗ್ರಾಮಗಳಿಗೂ ಬೇರೆ ಗ್ರಾಮದ ಜನರು ಪ್ರವೇಶಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.


ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ಕಾರ್ಯದರ್ಶಿ ಜಯವಿಭವಸ್ವಾಮಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.

ಮ.ಬೆಟ್ಟಕ್ಕೆ ಭಕ್ತರು ಬರುವುದು ಬೇಡ ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಸಂಘ-ಸಂಸ್ಥೆಯವರು ಪ್ರತಿಭಟನೆ ನಡೆಸಿದ್ದಾರೆ. ಮ.ಬೆಟ್ಟಕ್ಕೆ ಇದೀಗ ಪ್ರತಿದಿನ ಸುಮಾರು 3 ಸಾವಿರ ಭಕ್ತರು ಭೇಟಿ ನೀಡುತ್ತಿದ್ದು, ಪ್ರಾಧಿಕಾರದ ವತಿಯಿಂದ ಅವರನ್ನು ಥರ್ಮಲ್ ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸುವುದರ ಮೂಲಕ ಮುಂಜಾಗ್ರತೆ ಕ್ರಮ ವಹಿಸಲಾಗಿದೆ. ತಾಳುಬೆಟ್ಟದಲ್ಲಿಯೇ ಭಕ್ತರಿಗೆ ಆರೋಗ್ಯ ತಪಾಸಣೆ ನಡೆಸಲು ಯೋಚಿಸಲಾಗಿದೆ. ದೇಗುಲವನ್ನು ಬಂದ್ ಮಾಡುವ ಸಂಬಂಧ ಜಿಲ್ಲಾಡಳಿತದ ಗಮನಕ್ಕೆ ತರಲಾಗುವುದು. ಅವರು ನೀಡುವ ಆದೇಶ ಪಾಲನೆ ಮಾಡಲಾಗುವುದು.
ಜಯವಿಭವಸ್ವಾಮಿ, ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net