ಹಿಂದೂ ಆಲಯ ಜೀರ್ಣೋದ್ಧಾರ ವಿವಾದ, ಭಕ್ತರ ಆಕ್ರೋಶ

16cmy6
Published on

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಶ್ರೀ ನಾಗನಾಥೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕೆಲಸವು ವಿವಾದಕ್ಕೆ ಗುರಿಯಾಗಿದೆ. ತೀವ್ರ ವಿರೋಧದ ನಡುವೆಯೂ ಆಲಯದ ಮೂಲ ವಿಗ್ರಹಗಳು ಮತ್ತು ಪವಿತ್ರ ವೃಕ್ಷಗಳನ್ನು ತೆರವುಗೊಳಿಸುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.

ಇಲ್ಲಿನ ಶಮೀವೃಕ್ಷ, ಬಿಲ್ವ ವೃಕ್ಷ, ಅರಳಿಮರ ಮತ್ತು ನೆಲ್ಲಿ ಮರಗಳನ್ನು ಬೇರು ಸಹಿತ ಕಡಿದುಹಾಕಲಾಗಿದೆ. ಹಾಗೆಯೇ ಕ್ಷೇತ್ರ ಪಾಲಕರಾಗಿದ್ದ ಚಂಡಿಕೇಶ್ವರ, ಸುಬ್ರಮಣ್ಯೇಶ್ವರ ಪ್ರಭಾವಿ ನವಗ್ರಹಗಳನ್ನು ತೆರವುಗೊಳಿಸಲಾಗಿದೆ. ಈಗಾಗಲೇ ತಹಸೀಲ್ದಾರ್ ವಿಸರ್ಜಿತ ಸಮಿತಿಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ಇದರ ನಡುವೆಯೇ ಮೂರು ವರ್ಷಗಳಿಂದ ಕಾಮಗಾರಿಗಳನ್ನು ನಡೆಸುತ್ತಿರುವ ಅಭಿವೃದ್ಧಿ ಸಮಿತಿ ಮತ್ತು ಧರ್ಮದರ್ಶಿಗಳ ಸಮಿತಿಯು ಮೂಲ ದೇವರ ಸೇವೆಯನ್ನು ನಿಲ್ಲಿಸುವಲ್ಲಿ ಮಾತ್ರ ಸಫಲವಾಗಿದೆ. ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ವಿಸರ್ಜಿತ ಸಮಿತಿಗೆ ಮತ್ತೊಮ್ಮೆ ಅವಕಾಶ ಕೊಡಬಾರದೆಂಬ ಒತ್ತಾಯ ಕೇಳಿ ಬಂದಿದೆ.

ಮೂಲ ನಾಗನಾಥೇಶ್ವರ ಲಿಂಗವನ್ನು ತೆಗೆದು, ಇನ್ನು ತಪ್ಪುಗಳನ್ನು ಮಾಡಬಾರದು. ಭಕ್ತರ ಭಾವನೆಗಳಿಗೆ ವಿರೋಧವಾಗಿ ಸಮಿತಿಯವರು ನಡೆಸಿರುವ ಕಾರ್ಯಗಳನ್ನು ಶ್ರೀನಾಗನಾಥೇಶ್ವರಸ್ವಾಮಿ ಕ್ಷಮಿಸಿದರೂ ಕಾನೂನಿನ ಪ್ರಕಾರ ತಪ್ಪಿಸಿಕೊಳ್ಳುವುದು ಅಸಾಧ್ಯ ಎಂದು ಮಾಜಿ ನಗರಸಭಾ ಸದಸ್ಯರಾದ ಎಸ್.ಸುಬ್ರಮಣ್ಯಂ, ಟಿ.ಶ್ರೀನಿವಾಸ್, ಆರ್. ಶ್ರೀನಾಥ್ ಮುಖಂಡರಾದ ಕುಂಟಿಗಡ್ಡೆ ಲಕ್ಷಣ್, ಕೋನಪ್ಪಲ್ಲಿ ಕೋದಂಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net