ಮಂಚಮ್ಮದೇವಿ ದೇವಸ್ಥಾನ ಲೋಕಾರ್ಪಣೆ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಚುಂಚಶ್ರೀ ಸೇರಿ ಹಲವರು ಭಾಗಿ

Temple Dedication Ceremony Mandya
Published on

ಮಂಡ್ಯ: ನಗರದ ಕಲ್ಲಹಳ್ಳಿ ಹಾಗೂ ವಿ.ವಿ ನಗರ ನಿವಾಸಿಗಳ ಆರಾಧ್ಯದೇವತೆ ಮಂಚಮ್ಮ ದೇವಿಯ ನೂತನ ದೇವಾಲಯದ ಲೋಕಾರ್ಪಣೆ ಸಮಾರಂಭ ಎರಡು ದಿನ ಸಂಭ್ರಮದಿಂದ ನೆರವೇರಿತು.

ಸುಮಾರು 80 ಲಕ್ಷ ರೂ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿದೆ. ಗುರುವಾರ ಗ್ರಾಮದ ಕೊಡಮಕ್ಕಳು ಹಾಗೂ ಮುತ್ತೈದೆಯರು ಗಂಗಾ ಪೂಜೆ ನೆರವೇರಿಸಿ, ಮೀಸಲು ನೀರು ತಂದು ಗೋಪೂಜೆ ಹಾಗೂ ವೀರಭದ್ರ ಕುಣಿತ ಸಮೇತ ಮಂಗಳವಾದ್ಯದೊಂದಿಗೆ ಧಾರ್ಮಿಕ ವಿಧಿ ವಿಧಾನಗಳು ಮತ್ತು ಪೂಜಾ ಕೈಂಕರ್ಯಗಳು ಆರಂಭವಾಯಿತು. ಸಂಜೆ ಸುತ್ತೂರು ಸಮೀಪದ ತುಮ್ಮನೇರಳೆ ಗ್ರಾಮದ ನಾಗಲಿಂಗೇಶ್ವರಸ್ವಾಮಿ, ಕಲ್ಲಹಳ್ಳಿ ಗ್ರಾಮದ ಮಾರಮ್ಮದೇವಿ ಹಾಗೂ ವಿ.ವಿ ನಗರದ ಆದಿಶಕ್ತಿ ಮಾರಮ್ಮ ದೇವರ ಹೂ-ಹೊಂಬಾಳೆ ನೆರವೇರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ರಾತ್ರಿ ದೇವಸ್ಥಾನದಲ್ಲಿ ಮಂಡಲ ದರ್ಶನ, ಅಷ್ಟಾವಧಾನ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು. ಶುಕ್ರವಾರ ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತದಲ್ಲಿ ಮಂಚಮ್ಮ ದೇವರ ಗದ್ದುಗೆಗೆ ಪ್ರಾಣ ಪತ್ರಿಷ್ಠೆ ಮತ್ತು ನ್ಯಾಸಗಳು, ಕಲಾಹೋಮ ನೆರವೇರಿತು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ 10 ಸಾವಿರಕ್ಕೂ ಹೆಚ್ಚು ಜನರಿಗೆ ಅನ್ನದಾಸೋಯ ನಡೆಯಿತು.

ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಸ್ವಾಮೀಜಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ಮನುಷ್ಯ ಇಂದು ಸದೃಢನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮಿಕ ಭಕ್ತಿಯ ಬೇರುಗಳ ಜತೆ ಬದುಕುವ ಪ್ರವೃತ್ತಿ ರೂಢಿಸಿಕೊಂಡಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಆಧುನೀಕತೆ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಮನುಷ್ಯರು ಸೃಷ್ಠಿಕರ್ತ ಹಾಗೂ ಹೆತ್ತವರನ್ನು ಮರೆಯುವ ಸ್ಥಿತಿ ನಿರ್ಮಾಣವಾಗಿದೆ. ಬದಲಾವಣೆಯ ಕಾಲಘಟ್ಟದಲ್ಲಿ ವ್ಯಕ್ತಿಗಳ ಭಾವನೆಯೂ ಬದಲಾವಣೆಯಾಗಿದೆ. ಇಂತಹ ಸಂದರ್ಭದಲ್ಲಿ ನೂತನ ದೇವಾಲಯ ನಿರ್ಮಿಸಿ ಭಗವಂತನ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಸುತ್ತೂರು ಮಠದ ಪೀಠಾಧ್ಯಕ್ಷ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಮನುಷ್ಯ ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ದೇವರನ್ನು ಪೂಜಿಸಕೊಂಡು ಬರುತ್ತಿದ್ದಾನೆ. ಅದೇ ಮಾರ್ಗದಲ್ಲಿ ಕಲ್ಲಹಳ್ಳಿ ಗ್ರಾಮಸ್ಥರು ಸುಂದರವಾದ ಶ್ರೆ ಮಂಚಮ್ಮ ದೇವಿ ದೇವಾಲಯವನ್ನು ನೂತನವಾಗಿ ನಿರ್ಮಿಸಿದ್ದಾರೆ. ಇದು ಒಳ್ಳೆಯ ಕೆಲಸವಾಗಿದೆ. ಇಂದು ಮನುಷ್ಯನಲ್ಲಿ ಶಾಂತಿ ಮತ್ತು ನೆಮ್ಮದಿ ಮಾಯವಾಗಿದೆ. ಭಕ್ತಿ, ಶ್ರದ್ಧೆ ಹಾಗೂ ಆಸ್ಥೆಯಿಂದ ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಶಾಂತಿ ಮತ್ತು ನೆಮ್ಮದಿ ಲಭ್ಯವಾಗುತ್ತದೆ ಎಂದು ಅಭಿಪ್ರಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯಾನಂದ, ಮಂಡ್ಯ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮಂಚಮ್ಮ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಕೆ.ಎಲ್.ಶಿವರುದ್ರ, ಅಧ್ಯಕ್ಷ ಕೆ.ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಆನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net