ಪುತ್ತೂರು ಜಾತ್ರೆಗೆ ಚಪ್ಪರ ಮುಹೂರ್ತ - ಊರಿಗೆ ಹೆಸರು ಬರಲು ಕಾರಣವಾದ ಪೌರಾಣಿಕ ಕೆರೆಯ ಪಕ್ಕದಲ್ಲೇ ಅನ್ನದಾನಕ್ಕೆ ವ್ಯವಸ್ಥೆ

PTR_24 MAR_1
Published on

ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದ ಹಿನ್ನೆಲೆಯಲ್ಲಿ ದೇವಳದ ಪುಷ್ಕರಣಿ ಸಮೀಪದಲ್ಲಿ ಸೋಮವಾರ ಅನ್ನಛತ್ರದ ಚಪ್ಪರ ಮುಹೂರ್ತ ನೆರವೇರಿತು.

ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ನಿತ್ಯ ಬಲಿಯ ಬಳಿಕ ನೈಋತ್ಯ ಭಾಗದಲ್ಲಿ ಚಪ್ಪರ ಮುಹೂರ್ತದ ಕಾರ್ಯಕ್ರಮಗಳು ನಡೆದವು. ಪ್ರಧಾನ ಅರ್ಚಕ ವಸಂತ ಕೆದಿಲಾಯ ಧಾರ್ಮಿಕ ವಿಽವಿಧಾನಗಳನ್ನು ನಡೆಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೇಡೆಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ದಿನೇಶ್ ಪಿ.ವಿ, ನಳಿನಿ ಪಿ. ಶೆಟ್ಟಿ ಚಪ್ಪರ ಮುಹೂರ್ತ ನೆರವೇರಿಸಿದರು.

*ಪೂರ್ವಭಾವಿ ಸಭೆ: ದೇವಸ್ಥಾನದ ಆಡಳಿತ ಕಚೇರಿಯಲ್ಲಿ ಮಾ.೨೫ರಂದು ಬೆಳಿಗ್ಗೆ ೧೧ಕ್ಕೆ ಜಾತ್ರೋತ್ಸವದ ಪೂರ್ವ ತಯಾರಿ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾಽಕಾರಿಗಳ ಸಭೆ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ದೇವಸ್ಥಾನದ ಕಾರ್ಯನಿರ್ವಹಣಾಽಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಸದಸ್ಯೆ ವೀಣಾ ಬಿ.ಕೆ, ನಗರಸಭೆ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಯಕ್ಷಧ್ರುವ ಪಟ್ಟ ಫೌಂಡೇಷನ್ ಟ್ರಸ್ಟ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ, ಉಪಾಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ, ಟ್ರಸ್ಟಿಗಳಾದ ನೋಣಾಲು ಜೈರಾಜ್ ಭಂಡಾರಿ, ಎಂ.ದತ್ತಾತ್ರೆಯ ರಾವ್, ಜಯಕುಮಾರ್ ರೈ ಮಿತ್ರಂಪಾಡಿ, ಚಂದ್ರಹಾಸ ರೈ, ನುಳಿಯಾಲು ಸುಜೀರ್ ಶೆಟ್ಟಿ, ವಿಶ್ವನಾಥ್ ನಾಕ್ ಮತ್ತಿತರರು ಉಪಸ್ಥಿತರಿದ್ದರು.

ಅನ್ನ ಮುತ್ತು ಆದ ಐತಿಹ್ಯ

ದೇವಸ್ಥಾನದ ಹಿಂಭಾಗದಲ್ಲಿ ದೊಡ್ಡ ಕೆರೆಯನ್ನು ನಿರ್ಮಿಸಿದ್ದು, ಆಳವಾದರೂ ನೀರು ದೊರಕಲೇ ಇಲ್ಲ. ದೇವಳದ ಆಡಳಿತ ವರ್ಗ ಸಾವಿರಾರು ಮಂದಿಗೆ ಕೆರೆಯ ತಳದಲ್ಲಿ ಅನ್ನ ಸಂತರ್ಪಣೆಯ ವ್ಯವಸ್ಥೆ ಮಾಡಿತ್ತು. ಜನರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿದ್ದೂ ಅಲ್ಲದ್ದೆ, ಅಲ್ಲಿ ಬಿದ್ದ ಅನ್ನದ ಅಗಳುಗಳು ಮುತ್ತಾಗಿ ಬೆಳೆಯಿತು ಎಂಬ ಐತಿಹ್ಯವಿದೆ. ಮುತ್ತು ಬೆಳೆದ ಊರು ಮುತ್ತೂರು ಆಗಿದ್ದು, ಕಾಲಕ್ರಮೇಣ ಪುತ್ತೂರು ಆಯಿತು ಎಂಬ ಪ್ರತೀತಿಯಿದೆ. ಈ ವರ್ಷ ಇದೇ ಕೆರೆಯ ಪಕ್ಕದಲ್ಲೇ ಅನ್ನಛತ್ರ ನಿರ್ಮಾಣ ಮಾಡಲಾಗಿದ್ದು, ಭಕ್ತರಿಗೆ ಇಲ್ಲೇ ಅನ್ನದಾನ ನಡೆಯಲಿದೆ.

ಪ್ರಸಾದ ಭೋಜನಕ್ಕೆ ವ್ಯವಸ್ಥೆ

ಜಾತ್ರೆಯ ಸಂದರ್ಭದ ಭಕ್ತರಿಗೆ ಪ್ರಸಾದ ಭೋಜನ ವಿತರಿಸುವ ನಿಟ್ಟಿನಲ್ಲಿ ೩೦೦ ಅಡಿ ಉದ್ದ, ಸುಮಾರು ೭೦ ಅಡಿ ಅಗಲದ ಜಾಗವನ್ನು ಮೀಸಲಿಡಲಾಗಿದೆ. ಸುಮಾರು ೨೦ ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಪಾಕಶಾಲೆ, ಉಗ್ರಾಣ, ತರಕಾರಿ ಹೆಚ್ಚಲು ಕೊಠಡಿ, ಬಾಣಸಿಗರಿಗೆ ಹಾಗೂ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ಹಾಗೂ ತಾತ್ಕಲಿಕ ಶೌಚಗೃಹ ನಿರ್ಮಿಸಲಾಗುತ್ತದೆ. ವಿಶೇಷ ಆಹ್ವಾನಿತರಿಗೆ ಅನ್ನಪ್ರಸಾದ ವಿತರಿಸಲು ಅನುಕೂಲವಾಗುವಂತೆ ೧೦೦ ಆಸನ, ಅಶಕ್ತರಿಗೆ ಹಾಗೂ ವೃದ್ಧರಿಗೆ ಕುಳಿತು ಊಟಕ್ಕೆ ಅವಕಾಶ ಕಲ್ಪಿಸಲು ೧೦೦ ಆಸನ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದ ಜಾಗದಲ್ಲಿ ಎಲ್ಲರ ಊಟದ ವ್ಯವಸ್ಥೆಯಿರಲಿದೆ.

ಶಿವನಿಗೆ ತುಂಬಾ ಪ್ರಿಯವಾದ ಸೋಮವಾರದಂದು ಚಪ್ಪರ ಮುಹೂರ್ತ ನಡೆಸಲಾಗಿದೆ. ತೋಡಿಗೆ ಸುಮಾರು ೨ ಕೋಟಿ ರೂ. ವೆಚ್ಚದಲ್ಲಿ ನಿಮಾಣವಾಗುತ್ತಿರುವ ತಡೆಗೋಡೆ ಕೆಲಸ ನಾಲ್ಕು-ಐದು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಉಗ್ರಾಣದ ವ್ಯವಸ್ಥೆ, ವೈದಿಕರಿಗೆ, ವಿಐಪಿಗಳಿಗೆ ಊಟ, ಕಾಫಿ, ತಿಂಡಿಯ ವ್ಯವಸ್ಥೆ ಅಚ್ಚುಕಟ್ಟಾದ ರೀತಿಯಲ್ಲಿ ನಡೆಯಲಿದೆ. ತಂತ್ರಿ ವರ್ಗದವರಿಗೆ, ಅರ್ಚಕರಿಗಾಗಿ ೩೦ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಮಾಡಲಿದ್ದೇವೆ. ನಟರಾಜ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, ಹಿಂದಿನ ಅನ್ನದಾನದ ಜಾಗವನ್ನು ಅಂಗಡಿ ಹಾಗೂ ಜಾತ್ರೆ ವೀಕ್ಷಣೆಗೆ ಉಪಯೋಗಿಸಲಾಗಿದೆ.

| ಈಶ್ವರ ಭಟ್ ಪಂಜಿಗುಡ್ಡೆ

ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net