

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದ ಅಭಿವೃದ್ಧಿ ವಿಚಾರದಲ್ಲಿ ಪ್ರತಿ ಮನೆಗೆ ಹೋಗಿ ವಿನಂತಿ ಮಾಡಿ ಮನವೊಲಿಸಿ, ಪರಿಸ್ಥಿತಿ ಚೆನ್ನಾಗಿಲ್ಲದವರಿಗೆ ವೈಯಕ್ತಿಕ ನೆಲೆಯಲ್ಲಿ ಆರ್ಥಿಕ ಸಹಾಯವನ್ನು ನೀಡಿ ಮೂರು ಮನೆಯನ್ನು ತೆರವು ಮಾಡಲಾಗಿತ್ತು. ಸ್ವಇಚ್ಚೆಯಿಂದ ಬಿಟ್ಟ ಮನೆಯನ್ನು ತೆರವು ಮಾಡಿದ್ದು ಹೊರತು ಯಾರನ್ನೂ ಒತ್ತಾಯಪೂರ್ವಕವಾಗಿ ತೆರವು ಕಾರ್ಯ ಮಾಡುತ್ತಿಲ್ಲ. ದೇವಸ್ಥಾನದ ಅಭಿವೃದ್ಧಿ ಕಾರ್ಯ ಬೇಡ ಎಂಬುದನ್ನು ಭಕ್ತರು ಹೇಳಿದರೆ, ಪ್ರಶ್ನಾಚಿಂತನೆ ನಡೆಸಿ ಅಭಿವೃದ್ಧಿ ಕಾರ್ಯವನ್ನು ನಾವೇ ನಿಲ್ಲಿಸುತ್ತೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸಮೀಪದಲ್ಲಿರುವ ರಾಜಕಾಲುವೆಗೆ ೨ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ತಡೆಗೋಡೆ ಕಾಮಗಾರಿಗೆ ಶಿಲಾನ್ಯಾಸ ನಡೆಸಿ ಮಾತನಾಡಿದರು.
ಹಿಂದುತ್ವದ ಬಗ್ಗೆ ಮಾತನಾಡುತ್ತೇವೆ, ದೇವಸ್ಥಾನದ ವಿಚಾರದಲ್ಲಿ ಹಿಂದುತ್ವ ಎಲ್ಲಿ ಹೋಯಿತು. ಗತಿ ಇಲ್ಲದವರಿಗೆ ದೇವಸ್ಥಾನ ನೀಡುತ್ತದೆ. ಮೂರು ಮನೆಗಳನ್ನು ಇಟ್ಟುಕೊಂಡು ಬಾಡಿಗೆ ಕೊಟ್ಟು ಜೀವನ ನಡೆಸುವುದನ್ನು ಸಮಾಜ ಒಪ್ಪುವುದಿಲ್ಲ. ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಖಾತೆ ಮಾಡುವುದಕ್ಕೆ ಆದೇಶ ನೀಡಿದ್ದಾರಾ? ಖಾತೆ ಹೇಗೆ ಆಗಿದೆ ಎಂಬುದನ್ನು ತನಿಖೆ ನಡೆಸಲಾಗುವುದು. ಬಾಡಿಗೆ ಮನೆಗೆ ಖಾತೆ ಮಾಡುವುದಕ್ಕೆ ಸಾಧ್ಯವಾ ಎಂಬುದನ್ನು ಕಾನೂನಿನ ಮೂಲಕ ನೋಡಬೇಕಾಗಿದೆ ಎಂದು ತಿಳಿಸಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯರಾದ ದಿನೇಶ್ ಪಿ.ವಿ, ಸುಭಾಷ್ ಬೆಳ್ಳಿಪ್ಪಾಡಿ, ನಳಿನಿ ಶೆಟ್ಟಿ, ವಿನಯ ಸುವರ್ಣ, ಪೂಡಾ ಸದಸ್ಯ ನಿಹಾಲ್ ರೈ, ದೇವಳದ ವ್ಯವಸ್ಥಾಪಕ ಹರೀಶ್ ಶೆಟ್ಟಿ ಉಪಸ್ಥಿತರಿದ್ದರು.
ಮನೆ ಹಿಂತಿರುಗಿಸಿದ ಮತ್ತಿಬ್ಬರು
ಮಾಸ್ಟರ್ ಪ್ಲಾನ್‌ನಂತೆ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕಾಗಿ ದೇವಳದ ಜಾಗದಲ್ಲಿ ವಾಸವಾಗಿದ್ದ ರೂಪಾ, ಜಗದೀಶ್ಚಂದ್ರ ರೈ ಸ್ವ ಇಚ್ಛೆಯಿಂದ ಎರಡು ಮನೆಗಳನ್ನು ಶನಿವಾರ ಬಿಟ್ಟುಕೊಟ್ಟಿದ್ದಾರೆ. ದೇವರ ಮುಂದೆ ವಿಶೇಷ ಪ್ರಾರ್ಥನೆಯನ್ನು ನಡೆಸಿ, ಪ್ರಸಾದ ನೀಡಲಾಯಿತು. ಈ ಮೂಲಕ ದೇವಸ್ಥಾನದ ಸುತ್ತ ಇದ್ದ ೯ ಮನೆಗಳಲ್ಲಿ ೫ ಮನೆ ತೆರವು ಆದಂತಾಗಿದೆ. ಇನ್ನು ನಾಲ್ಕು ಮನೆಗಳು ಉಳಿದುಕೊಂಡಿವೆ.
ದೇವಸ್ಥಾನದ ಮನೆಯಲ್ಲಿ ವಾಸವಿದ್ದ ಹಿನ್ನಲೆ ತೆಂಗಿನಕಾಯಿ ಸೇರಿ ವಿವಿಧ ಸಾಮಾಗ್ರಿಗಳನ್ನು ಅಜ್ಜಿಯ ಕಾಲದಲ್ಲಿ ದೇವಾಸ್ಥಾನಕ್ಕೆ ನೀಡಲಾಗುತ್ತಿತ್ತು. ಈಗ ಜಾತ್ರೆಯ ಸಮಯದಲ್ಲಿ ವಂತಿಗೆಯನ್ನು ಪಾವತಿಸಿಕೊಂಡು ಬರುತ್ತಿದ್ದೇವೆ.
| ಜಗದೀಶ್ಚಂದ್ರ ರೈ
ದೇವಸ್ಥಾನಕ್ಕೆ ಮನೆ ಬಿಟ್ಟುಕೊಟ್ಟ ವ್ಯಕ್ತಿ