ಪುತ್ತೂರು ದೇವಳದಲ್ಲಿ ಪ್ರಶ್ನಾಚಿಂತನೆ -  ವಿವಿಧ ಸಮಸ್ಯೆಗಳ ಚಿಂತನೆ - ಗುಡಿಗಳ ನಿರ್ಮಾಣಕ್ಕೆ ಅಸಮಾಧಾನ

PTR_24 JUN_1
Published on

ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಸುಪಾಸಿನಲ್ಲಿರುವ ವಿವಿಧ ಸಾನ್ನಿಧ್ಯಗಳ ವಿಚಾರದಲ್ಲಿ ಮಂಗಳವಾರ ಜೋತಿಷಿ ನಿಟ್ಟೆ ಪ್ರಸನ್ನ ಆಚಾರ್ಯ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಯಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಹಾಗು ಸಮಿತಿ ಸದಸ್ಯರು ಪ್ರಶ್ನಾಚಿಂತನೆಗೆ ಚಾಲನೆ ನೀಡಿದರು.

ಆರೂಢ ರಾಶಿಯಾಗಿ ಕನ್ಯಾ ರಾಶಿ ಬಂದಿದ್ದು, ಕೆಲಸಗಳನ್ನು ವೇಗದಲ್ಲಿ ಮಾಡಲು ಸಾಧ್ಯವಿಲ್ಲ. ದೇವಾಲಯದ ಮುಂಭಾಗದಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ದೇವರ ಒಪ್ಪಿಗೆಯಿಲ್ಲ. ಹೊರ ಭಾಗದ ಸುತ್ತಮುತ್ತಲಿನ ಗುಡಿಯಿಂದ ಈಶ್ವರನಿಗೆ ಪೂರ್ಣ ತೃಪ್ತಿಯಾಗಿಲ್ಲ ಎಂದು ಕಂಡುಬಂತು. ಮಾಡಿದ ವ್ಯವಸ್ಥೆಗಳು ದೇವಸ್ಥಾನಕ್ಕೆ ಶಾಶ್ವತ ವ್ಯವಸ್ಥೆಯಾಗಬೇಕು. ಮತ್ತೆ ಮತ್ತೆ ದೋಷಗಳ ಪರಿಹಾರ ಕಾರ್ಯ ಮಾಡುವ ಬದಲು ಸರಿಯಾದ ವ್ಯವಸ್ಥೆ ಮಾಡಬೇಕು ಎಂದರು.

ದೈವಜ್ಞರ ಸಹಾಯಕ ಶ್ರೀನಿವಾಸ ಭಟ್, ಪ್ರಧಾನ ಅರ್ಚಕ ವಸಂತ ಕೆದಿಲಾಯ, ವಿ.ಎಸ್.ಭಟ್ ಚಿಂತನಾ ವೇದಿಕೆಯಲ್ಲಿದ್ದರು. ಶಾಸಕ ಅಶೋಕ್ ಕುಮಾರ್ ರೈ, ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಸುಭಾಶ್ ರೈ ಬೆಳ್ಳಿಪ್ಪಾಡಿ, ದಿನೇಶ್ ಪಿ.ವಿ., ನಳಿನಿ ಪಿ.ಶೆಟ್ಟಿ, ಈಶ್ವರ ಬೇಡೆಕರ್, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಹರೀಶ್ ಶೆಟ್ಟಿ ಮತ್ತಿತರರಿದ್ದರು.

ವಿವಿಧ ನಿರ್ಣಯಗಳು

ಕೆರೆ ನೀರನ್ನು ಬಳಸಿ ಕಾರಂಜಿ ಮಾಡಬಾರದು. ದೇವರನ್ನು ಬಿಟ್ಟು ಬೇರೆ ವಿಚಾರಕ್ಕೆ ಮಹತ್ವ ಬೇಡ. ಈಶಾನ್ಯ ಭಾಗದಲ್ಲಿ ಕೊಳಚೆ ನೀರು ನಿಲ್ಲುವುದು ಉತ್ತಮವಲ್ಲ. ಸಭಾಂಗಣವನ್ನು ತೆಗೆಯುವುದೇ ಉತ್ತಮ. ರಾಷ್ಟ್ರ ಧ್ವಜ ನಿರ್ಮಾಣಕ್ಕೆ ಯಾವುದೇ ತಡೆಯಿಲ್ಲ.

ಅಯ್ಯಪ್ಪನಿಗೆ ನೈಋತ್ಯದಲ್ಲಿ ವ್ಯವಸ್ಥೆ

ಕ್ಷೇತ್ರದ ಪರಿಧಿಯಲ್ಲಿ ಅಯ್ಯಪ್ಪ ಇರುವುದು ಸರಿಯಲ್ಲ. ಸಮಿತಿ ರಚಿಸಿ, ದೇವಸ್ಥಾನದ ವ್ಯಾಪ್ತಿಯನ್ನು ಬಿಟ್ಟು ಅಲ್ಲಿ ಭಜನಾ ಮಂದಿರ ನಿರ್ಮಿಸಿ ಅಲ್ಲಿ ಈ ವಿಗ್ರಹ ಆರಾಧನೆ ಮಾಡಬಹುದು. ನೈಋತ್ಯ ಭಾಗದಲ್ಲಿ ಅರ್ಧಕ್ಕೆ ನಿಂತ ಕಟ್ಟಡ ಇರುವ ಸ್ಥಳಕ್ಕೆ ವರ್ಗಾವಣೆ ಮಾಡುವುದೇ ಪರಿಹಾರವಾಗಿದೆ.

ನಾಗ ಮೂಲಕ್ಕೆ, ನವಗ್ರಹ ಗೋಪುರಕ್ಕೆ

ನಾಗನನ್ನು ಮೂಲ ಸ್ಥಾನಕ್ಕೆ ಸೇರಿಸುವುದಕ್ಕೆ ಅನುಕೂಲಕರವಾಗಿದೆ. ನಾಗನ ಮೂಲ ಬಿಂಬವೇ ಬೇಕಾಗಿದೆ. ಮೂಲ ಸ್ಥಾನದಲ್ಲಿ ಚಿತ್ರ ಕೂಟ ನಿರ್ಮಾಣ ಮಾಡಬೇಕು. ನಾಗನನ್ನು ದೇವಸ್ಥಾನಕ್ಕೆ ನೀಡಿದವರು ಎಲ್ಲರೂ ಬರಬೇಕು. ನವಗ್ರಹ ಗುಡಿಯನ್ನು ದೇವಸ್ಥಾನದ ಒಳಗಿನ ಗೋಪುರದಲ್ಲಿ ವ್ಯವಸ್ಥೆ ಮಾಡಬಹುದು. ಜತೆಗೆ ಶನಿಗೆ ಪ್ರಾಧ್ಯಾನತೆ ನೀಡಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net