ದೇವಾಲಯಗಳಿಗೆ ಶಕ್ತಿ ತುಂಬಿದ ಕಾಣಿಕೆ

temple
Published on

ಮಡಿಕೇರಿ:

ಇತ್ತೀಚಿನ ವರ್ಷಗಳಲ್ಲಿ ಕೊಡಗಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದೆ. ಇದು ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಕಾರಣವಾಗಿದ್ದು, ಜಿಲ್ಲೆಯ ದೇವಾಲಯಗಳ ಆದಾಯವೂ ದೊಡ್ಡ ಪ್ರಮಾಣದಲ್ಲಿ ಏರಿಕೆ ಆಗಿದೆ. ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ ಮೂರು ಪ್ರಮುಖ ದೇವಾಲಯಗಳು ಕಳೆದ 5 ವರ್ಷಗಳಲ್ಲಿ ಸುಮಾರು 13 ಕೋಟಿ ರೂ. ಆದಾಯ ಗಳಿಸಿವೆ.

ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಮಡಿಕೇರಿ ತಾಲೂಕಿನ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನ, ಮಡಿಕೇರಿ ನಗರದಲ್ಲಿ ಇರುವ ಶ್ರೀ ಓಂಕಾರೇಶ್ವರ ದೇವಸ್ಥಾನ ಹಾಗೂ ಮಡಿಕೇರಿ ತಾಲೂಕು ಪಾಡಿಯಲ್ಲಿ ಇರುವ ಶ್ರೀ ಇಗ್ಗುತ್ತಪ್ಪ ದೇವಾಲಯಗಳು ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಎ ಪ್ರವರ್ಗದ ದೇವಸ್ಥಾನಗಳಾಗಿವೆ.

ಈ ಮೂರು ದೇವಾಲಯಗಳ ನಾಲ್ಕು ತಾಣಗಳು ಕೂಡ ಜಿಲ್ಲೆಯ ಆಸ್ತಿಕರ ಪಾಲಿನ ಪವಿತ್ರ ಕ್ಷೇತ್ರಗಳಾಗಿವೆ. ಹಾಗಾಗಿ ಇವುಗಳನ್ನು ಪ್ರವಾಸಿ ತಾಣಗಳ ಪಟ್ಟಿಯಿಂದ ತೆಗೆದು ಪುಣ್ಯತೀರ್ಥ ಕ್ಷೇತ್ರಗಳಾಗಿ ಗುರುತಿಸಬೇಕು ಎನ್ನುವ ಬೇಡಿಕೆ ಮಧ್ಯೆಯೇ ಭಕ್ತರ ಜತೆಗೆ ಪ್ರವಾಸಿಗರಿಂದಲೂ ಉತ್ತಮ ಆದಾಯ ಹರಿದು ಬಂದಿದೆ.

ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನಕ್ಕೆ 2019-20ರಲ್ಲಿ 1.86 ಕೋಟಿ ರೂ., 2020-21ರಲ್ಲಿ 1.07 ಕೋಟಿ ರೂ., 2021-22ರಲ್ಲಿ 1.42 ಕೋಟಿ ರೂ., 2022-23ರಲ್ಲಿ 2.96 ಕೋಟಿ ರೂ. ಹಾಗೂ 2023-24ರಲ್ಲಿ 2.43 ಕೋಟಿ ರೂ. ಸೇರಿದಂತೆ ಒಟ್ಟು 9.75 ಕೋಟಿ ರೂ. ಆದಾಯ ಬಂದಿದೆ.

ಮಡಿಕೇರಿ ನಗರದಲ್ಲಿರುವ ವಿಶಿಷ್ಟ ಇಂಡೋ ಸಾರ್ಸನಿಕ್ ವಾಸ್ತು ಶೈಲಿಯ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ 2019-20ರಲ್ಲಿ 55.7 ಲಕ್ಷ ರೂ., 2020-21ರಲ್ಲಿ 18.75 ಲಕ್ಷ ರೂ., 2021-22ರಲ್ಲಿ 10.04 ಲಕ್ಷ ರೂ., 2022-23ರಲ್ಲಿ 62.22 ಲಕ್ಷ ರೂ. ಹಾಗೂ 2023-24ರಲ್ಲಿ 68.81 ಲಕ್ಷ ರೂ. ಸೇರಿದಂತೆ ಒಟ್ಟು 2.16 ಕೋಟಿ ರೂ. ಆದಾಯ ಬಂದಿದೆ.

ಕೊಡಗಿನ ಮಳೆ ದೇವರು ಎಂದೇ ಪ್ರತೀತಿ ಇರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ 2019-20ರಲ್ಲಿ 26.79 ಲಕ್ಷ ರೂ., 2020-21ರಲ್ಲಿ 21.07 ಲಕ್ಷ ರೂ., 2021-22ರಲ್ಲಿ 18.43 ಲಕ್ಷ ರೂ., 2022-23ರಲ್ಲಿ 29.81 ಲಕ್ಷ ರೂ. ಹಾಗೂ 2023-24ರಲ್ಲಿ 28.11 ಲಕ್ಷ ರೂ. ಸೇರಿದಂತೆ ಒಟ್ಟು 1.24 ಕೋಟಿ ರೂ. ಆದಾಯ ಬಂದಿದೆ.

ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಎ ಪ್ರವರ್ಗದ ಜಿಲ್ಲೆಯ ಮೂರು ದೇವಸ್ಥಾನಗಳ ಪೈಕಿ ಕಾವೇರಿ ಉಗಮಸ್ಥಾನ ತಲಕಾವೇರಿ ಮತ್ತು ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲ ಒಳಗೊಂಡ ಶ್ರೀ ಭಾಗಮಂಡಲ, ತಲಕಾವೇರಿ ದೇವಸ್ಥಾನದ ವಾರ್ಷಿಕ ಆದಾಯ ಕೋಟಿ ರೂ. ದಾಟಿದೆ. ಅಕ್ಟೋಬರ್ 17ರಿಂದ ನವೆಂಬರ್ 17ರ ತನಕ ಒಂದು ತಿಂಗಳ ಕಾಲ ಶ್ರೀ ಕ್ಷೇತ್ರದಲ್ಲಿ ನಡೆಯುವ ಕಾವೇರಿ ತುಲಾ ಸಂಕ್ರಮಣ ಜಾತ್ರೆ ಸಮಯದಲ್ಲಿ ಹೆಚ್ಚಿನ ಭಕ್ತರು ಆಗಮಿಸುವುದರಿಂದ ಆದಾಯದ ಸಿಂಹ ಪಾಲು ಈ ಒಂದು ತಿಂಗಳಿನಲ್ಲೇ ಬರುತ್ತದೆ.

ಕೊಡಗಿಗೆ ಆಗಮಿಸುವ ಪ್ರವಾಸಿಗರ ಪೈಕಿ ಬಹುತೇಕರು ಭಾಗಮಂಡಲ, ತಲಕಾವೇರಿ ಹಾಗೂ ಮಡಿಕೇರಿ ಓಂಕಾರೇಶ್ವರ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಹಾಗಾಗಿ ಪ್ರವಾಸಿಗರ ಮೂಲಕವೂ ಈ ಎರಡು ದೇವಾಲಯಕ್ಕೆ ಆದಾಯ ಬಂದಿರುವ ಸಾಧ್ಯತೆ ಇದೆ ಎನ್ನುತ್ತಾರೆ ಅಧಿಕಾರಿಗಳು. ಅದರಲ್ಲೂ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಇರುವ ಶ್ರೀ ಓಂಕಾರೇಶ್ವರ ದೇವಾಲದ ಆದಾಯ ವರ್ಷದಿಂದ ವರ್ಷಕ್ಕೆ ಹೆಚ್ಚಾಗಿರುವುದು ಕೂಡ ಗಮನಾರ್ಹವಾಗಿದೆ.

ದೇವಾಲಯಕ್ಕೆ ಆಗಮಿಸುವ ಭಕ್ತರು ತಾವು ನಂಬಿದ ದೇವರಿಗಾಗಿ ಕೊಡುವ ಕಾಣಿಕೆ, ದೇಣಿಗೆ, ಹರಕೆ ಸೇವೆ ಇತ್ಯಾದಿಗಳ ಮೂಲಕ ದೇಗುಲಗಳಿಗೆ ಆದಾಯ ಬರುತ್ತದೆ. ದೇವಾಲಯಕ್ಕೆ ಬರುವ ಯಾವುದೇ ಆದಾಯವನ್ನು ಸರ್ಕಾರದ ಬೊಕ್ಕಸಕ್ಕೆ ಸಂದಾಯ ಮಾಡುವುದಿಲ್ಲ ಎನ್ನುವುದು ಧಾರ್ಮಿಕ ದತ್ತಿ ಇಲಾಖಾ ಅಧಿಕಾರಿಗಳ ಸ್ಪಷ್ಟನೆ ಆಗಿದೆ. ಇದರ ಬದಲು ದೇವಾಲಯದ ಆದಾಯವನ್ನು ಆಯಾಯ ದೇವಾಲಯಗಳ ಬ್ಯಾಂಕ್ ಖಾತೆಯ ನಿಧಿಗೆ ಜಮಾ ಮಾಡಲಾಗುತ್ತದೆ.

ಈ ರೀತಿಯಲ್ಲಿ ದೇವಾಲಯ ಖಾತೆಗೆ ಜಮಾ ಆಗುವ ಆದಾಯದ ಮೊತ್ತದ ಬಳಕೆ ಬಗ್ಗೆ ಸ್ಥಳೀಯರನ್ನೊಳಗೊಂಡAತೆ ರಚಿಸಲಾಗಿರುವ 9 ಜನ ಸದಸ್ಯರ ವ್ಯವಸ್ಥಾಪನಾ ಸಮಿತಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ. ದೇವಾಲಯದ ವಾರ್ಷಿಕ ಆಯವ್ಯಯ ಮತ್ತು ಮೂಲಭೂತ ಸೌಕರ್ಯ ಕಲ್ಪಿಸುವುದು ಇತ್ಯಾದಿಗಳ ಕುರಿತಂತೆ ಚರ್ಚಿಸಿ ಈ ಸಮಿತಿ ನಿರ್ಣಯ ಕೈಗೊಳ್ಳುತ್ತದೆ. ಉಳಿಯುವ ಮೊತ್ತವನ್ನು ದೇವಾಲಯದ ನಿಶ್ಚಿತ ಠೇವಣಿ ಅಥವಾ ಉಳಿತಾಯ ಖಾತೆಯಲ್ಲಿ ನಿರ್ವಹಿಸಲಾಗುತ್ತದೆ.

=====

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 2ನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ 'ಶಕ್ತಿ' ಯೋಜನೆ ರಾಜ್ಯದ ದೇವಾಲಯಗಳ ಕಾಣಿಕೆ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಅವಕಾಶ ಇರುವುದರಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಗಳ ದರ್ಶನಕ್ಕೆ ತೆರಳುವುದರಿಂದ ಸಾಕಷ್ಟು ದೇವಾಲಯಗಳ ಆದಾಯ ಹೆಚ್ಚಳ ಆಗಿರುವ ಬಗ್ಗೆ ಲೆಕ್ಕಾಚಾರಗಳು ನಡೆದಿದೆ. ಆದರೆ ಕೊಡಗಿನಲ್ಲಿ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯ ಹೊರತುಪಡಿಸಿ ಉಳಿದ ಎರಡು ದೇವಾಲಯಗಳ ಮೇಲೆ ಈ ಯೋಜನೆ ಅಂಥ ಪರಿಣಾಮ ಬೀರಿದಂತೆ ಕಂಡುಬರುತ್ತಿಲ್ಲ. ತಲಕಾವೇರಿ ಭಾಗಮಂಡಲ ದೇವಾಲಯದ ಆದಾಯ 2022-23ರಲ್ಲಿ 2.96 ಕೋಟಿ ರೂ. ಇದ್ದರೆ 2023-24ರಲ್ಲಿ 2.43 ಕೋಟಿ ರೂ.ಗೆ ಇಳಿದಿದೆ. ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದ ಆದಾಯ 2022-23ರಲ್ಲಿ 29.81 ಲಕ್ಷ ರೂ. ಇದ್ದಿದ್ದು 2023-24ರಲ್ಲಿ 28.11 ಲಕ್ಷ ರೂ. ಆಗಿದೆ. ಆದರೆ ಮಡಿಕೇರಿ ಶ್ರೀ ಓಂಕಾರೇಶ್ವರ ದೇವಾಲಯದ ಆದಾಯ ಮಾತ್ರ 2022-23ರಲ್ಲಿ 62.22 ಲಕ್ಷ ರೂ. ಇದ್ದಿದ್ದು 2023-24ರಲ್ಲಿ 68.81 ಲಕ್ಷ ರೂ.ಗೆ ಏರಿಕೆ ಕಂಡಿದೆ.

=====

ಧಾರ್ಮಿಕ ದತ್ತಿ ಇಲಾಖೆಗೆ ಸೇರಿದ ದೇವಾಲಯಗಳ ಪೈಕಿ ಬಹುತೇಕ ದೇವಾಲಯಗಳು ಗ್ರಾಮ ಪಂಚಾಯಿತಿ, ಪುರಸಭೆ, ನಗರಸಭೆ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಇದ್ದು, ಈ ದೇವಾಲಯಗಳಿಗೆ ಸೇರಿದ ಆಯಕಟ್ಟಿನಲ್ಲಿರುವ ಖಾಲಿ ಜಾಗಗಳನ್ನು ಗುರುತಿಸಿ, ದೇವಾಲಯದ ಆರ್ಥಿಕ ಸ್ಥಿತಿಗತಿಯನ್ನು ಗಣನೆಗೆ ತೆಗೆದುಕೊಂಡು ದೇವಾಲಯಕ್ಕೆ ಹೆಚ್ಚಿನ ಆದಾಯ ಬರುವ ನಿಟ್ಟಿನಲ್ಲಿ ಕಲ್ಯಾಣ ಮಂಟಪ, ಚಾರ್ಜಿಂಗ್ ಸ್ಟೇಷನ್, ಪೆಟ್ರೋಲ್ ಬಂಕ್, ಅಂಗಡಿ ಮಳಿಗೆಗಳ ನಿರ್ಮಾಣ, ವಾಣಿಜ್ಯ ಸಂಕೀರ್ಣ ನಿರ್ಮಾಣ ಮತ್ತಿತರ ಹೆಚ್ಚಿನ ಆದಾಯ ತರುವ ಕಾಮಗಾರಿಯನ್ನು ನಿಯಮಾನುಸಾರ ಪರಿಶೀಲಿಸಿ ಕೈಗೊಳ್ಳುವ ಸಲುವಾಗಿ ದೇವಾಲಯಗಳಿಗೆ ಸೇರಿದ ಖಾಲಿ ಜಾಗಗಳ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ.

ರಾಮಲಿಂಗಾರೆಡ್ಡಿ, ಸಾರಿಗೆ, ಧಾರ್ಮಿಕ ಮತ್ತು ದತ್ತಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net