ಪಾಲಿಕೆಯಲ್ಲಿ ಉಷ್ಣಾಂಶ ಪರೀಕ್ಷೆ; 3 ಹಂತದಲ್ಲಿ ಸ್ಯಾನಿಟೈಸರ್​ಗೆ ಕ್ರಮ

bbmp
Published on

ಬೆಂಗಳೂರು: ಕರೊನಾ ಭೀತಿ ಹಿನ್ನೆಲೆಯಲ್ಲಿ ಪಾಲಿಕೆ ಕಚೇರಿಯಲ್ಲಿ ಕಚೇರಿಗೆ ಬರುವವರನ್ನು ಥರ್ಮಲ್ ಸ್ಕ್ರೀನ್ ಮೂಲಕ ತಪಾಸಣೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್​ಕುಮಾರ್ ತಿಳಿಸಿದ್ದಾರೆ.

ಕರೊನಾ ಸೋಂಕು ಪಾಲಿಕೆ ಕಚೇರಿಯ ಸಿಬ್ಬಂದಿಗೆ ಬರದಂತೆ ತಡೆಗಟ್ಟಲು ಜಾಗೃತಿ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೇ ಕಚೇರಿಯಲ್ಲಿ ಮೂರು ಹಂತದಲ್ಲಿ ಸ್ಯಾನಿಟೈಸರ್ ಅಳವಡಿಸಲಾಗಿದೆ. ಪಾಲಿಕೆ ಕಚೇರಿಯ ಕಟ್ಟಡದ ಒಳಗೆ ಪ್ರವೇಶಿಸುವಾಗ, ಸಂಬಂಧಿಸಿದ ಅಧಿಕಾರಿಗಳ ಕಚೇರಿಗಳು ಹಾಗೂ ಎಲ್ಲ ಅಧಿಕಾರಿಗಳ ಬಳಿ ಸ್ಯಾನಿಟೈಸರ್ ಅಳವಡಿಸಲು ಸೂಚಿಸಲಾಗಿದೆ. ಗುರುವಾರದಿಂದ ದೇಹದಲ್ಲಿನ ಉಷ್ಣಾಂಶ ಪರೀಕ್ಷೆ (ಥರ್ಮಲ್ ಸ್ಕ್ರೀನಿಂಗ್) ಮೂಲಕ ತಪಾಸಣೆ ನಡೆಸಲಾಗುವುದು ಎಂದರು.

ಕರೊನಾ ಮತ್ತು ಇತರೆ ಸಾಂಕ್ರಾಮಿಕ ರೋಗಗಳು ಹರಡದಂತೆ ಪಾಲಿಕೆಯ ಎಲ್ಲ ಕಚೇರಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಮಧ್ಯಾಹ್ನ 3ರಿಂದ 5ರವರೆಗೆ ಜನರ ಭೇಟಿಗೆ ಅವಕಾಶ ನೀಡಲಾಗಿದೆ. ಸಾರ್ವಜನಿಕರ ಪ್ರವೇಶ ತಡೆಯಲು ಪಾಲಿಕೆ ಕಚೇರಿ ಮುಖ್ಯ ದ್ವಾರ, ಪೌರ ಸಭಾಂಗಣ ಕಟ್ಟಡ, ಕಚೇರಿಗಳಿಗೆ ತಲಾ 4 ಜನರಂತೆ 24 ಮಾರ್ಷಲ್ ನೇಮಿಸಲಾಗಿದೆ ಎಂದರು.

ರಂಗೋಲಿ ಬಿಡಿಸಿ ಜನಜಾಗೃತಿ: ಪಾಲಿಕೆ ಕೇಂದ್ರ ಕಚೇರಿಯ ಕೆಂಪೇಗೌಡ ಪೌರ ಸಭಾಂಗಣದ ಪ್ರಾಂಗಣದಲ್ಲಿ ಕಲಾವಿದ ಅಕ್ಷಯ್ ಜಾಲಿಹಾಳ್ ಅವರು ರಂಗೋಲಿ ಬಿಡಿಸುವ ಮೂಲಕ ಕರೊನಾ ಜಾಗೃತಿ ಮೂಡಿಸಿದರು. ‘ಕೈ ಕುಲುಕುವುದು ಬೇಡ- ನಮಸ್ಕರಿಸಿ, ಭಯದಿಂದ ಎಲ್ಲರೂ ಮಾಸ್ಕ್ ಧರಿಸುವುದು ಬೇಡ, ನಿಯಮಿತವಾಗಿ ಕೈಗಳನ್ನು ಸ್ವಚ್ಛಗೊಳಿಸಿ’ ಎಂದು ಸಂದೇಶ ಸಾರಿದರು.

ವಿಶೇಷ ಸಭೆಗೆ ವಾಜಿದ್ ಒತ್ತಾಯ: ವಿಶೇಷ ಸಭೆಯೊಂದನ್ನು ಏರ್ಪಡಿಸಿ ಎಲ್ಲ ಕಾಪೋರೇಟರ್​ಗಳಿಗೂ ಕರೊನಾ ಬಗ್ಗೆ ಮಾಹಿತಿ ನೀಡಬೇಕು. ಈ ಬಗ್ಗೆ ತುರ್ತು ಕ್ರಮಗಳ ಕುರಿತು ರ್ಚಚಿಸಲು ಮೇಯರ್ ಕೂಡಲೇ ವಿಶೇಷ ಸಭೆ ಕರೆಯಬೇಕು ಎಂದು ಪಾಲಿಕೆ ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್ ಪತ್ರದ ಮೂಲಕ ಮನವಿ ಮಾಡಿದ್ದಾರೆ.

ಬಿಬಿಎಂಪಿ ವಿರುದ್ಧ ಸಾರ್ವಜನಿಕರ ಆಕ್ರೋಶ: ಪ್ರತಿನಿತ್ಯ ಪಾಲಿಕೆ ಕೇಂದ್ರ ಕಚೇರಿಗೆ ಸಾವಿರಾರು ಮಂದಿ ಆಗಮಿಸುತ್ತಾರೆ. ಆದರೆ, ಕರೊನಾ ಭೀತಿ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ 3ರಿಂದ ಸಾರ್ವಜನಿಕರ ಪ್ರವೇಶಕ್ಕೆ ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಹಾಗಾಗಿ ಪಾಲಿಕೆ ಅಧಿಕಾರಿಗಳು, ನೌಕರರು, ಮಾಧ್ಯಮಗಳ ವರದಿಗಾರರು ಗುರುತಿನ ಚೀಟಿ ತೋರಿಸಿ ಪಾಲಿಕೆ ಕಚೇರಿಯ ಒಳಗೆ ಹೋದರೆ, ಜನಪ್ರತಿನಿಧಿಗಳ ಬೆಂಬಲಿಗರು ಸಾರ್ವಜನಿಕರು ರಕ್ಷಣಾ ಸಿಬ್ಬಂದಿ ಜತೆಗೆ ವಾಗ್ವಾದ ನಡೆಸುವ ಹಾಗೂ ಆಕ್ರೋಶ ವ್ಯಕ್ತಪಡಿಸಿದ ದೃಶ್ಯ ಕಂಡುಬಂತು.

ಅಧಿಕಾರಿಗಳ ಬಳಿ ಅಳವಡಿಸಿ: ಪಾಲಿಕೆ ಕಚೇರಿಗಳಲ್ಲಿ ಬುಧವಾರ ತಪಾಸಣೆ ನಡೆಸಿದ ಮೇಯರ್ ಗೌತಮ್ುಮಾರ್, ಎಲ್ಲ ಕಚೇರಿಗಳಲ್ಲಿ ಎರಡು ಹಂತದಲ್ಲಿ ಕಡ್ಡಾಯ ಸ್ಯಾನಿಟೈಸರ್ ಅಳವಡಿಸಬೇಕು ಎಂದು ಸೂಚಿಸಿದರು. ಕೆಲವರು ವೈಯಕ್ತಿಕವಾಗಿ ಸ್ಯಾನಿಟೈಸರ್ ಇಟ್ಟುಕೊಂಡಿದ್ದರೆ, ಬೇರೆ ವ್ಯಕ್ತಿಗಳು ನೀಡಿದ ಕಡತ ಅಥವಾ ಇತರ ಮೂಲಗಳಿಂದ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಲ್ಲ ಕಚೇರಿಗಳಲ್ಲಿ ಪ್ರವೇಶ ದ್ವಾರದ ಬಳಿ ಹಾಗೂ ಅಧಿಕಾರಿಗಳ ಬಳಿ ಸ್ಯಾನಿಟೈಸರ್ ಅಳವಡಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net