ಬಿಸಿಲ ಪ್ರಖರತೆಗೆ ಬೆಚ್ಚಿ ಬಿದ್ದ ಜನತೆ!

20SHIVA 01
Published on

ರಾಯಚೂರು: ಕೆಲವು ದಿನಗಳಿಂದ ಜಿಲ್ಲೆಯಲ್ಲಿ ತಾಪಮಾನದಲ್ಲಿ ತೀವ್ರ ಹೆಚ್ಚಳವಾಗುತ್ತಿರುವುದರ ಜತೆಗೆ ಬಿಸಿ ಗಾಳಿ ಬೀಸುತ್ತಿರುವುದರಿಂದ ಜನರು ತತ್ತರಿಸುವಂತಾಗಿದೆ. ಮಧ್ಯಾಹ್ನ ಹೊರಬರಲು ಹಿಂಜರಿಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜಿಲ್ಲೆಯನ್ನು ಬಿಸಿಲ ನಾಡು ಎಂದು ಕರೆಯುತ್ತಿದ್ದರೂ ಈ ಬಾರಿ ಹಿಂದಿನ ವರ್ಷಗಳಿಗೆ ಹೋಲಿಸಿದಲ್ಲಿ ಬಿಸಿಲ ಪ್ರಖರತೆ ಹೆಚ್ಚಾಗಿದೆ. ವಾತಾವರಣದಲ್ಲಿ ಆರ್ದ್ರತೆ ಕಡಿಮೆಯಿರುವುದರಿಂದ ರಾತ್ರಿ ಸಮಯದಲ್ಲೂ ಹೆಚ್ಚಿನ ಸೆಖೆಯಿಂದಾಗಿ ವಯಸ್ಸಾದವರು, ಮಕ್ಕಳು ಸಾಕಷ್ಟು ಸಮಸ್ಯೆ ಎದುರಿಸುವಂತಾಗಿದೆ.

ಈ ಹಿಂದೆ ಬೇಸಿಗೆ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿ ಸಮಯವನ್ನು ಬೆಳಗ್ಗೆ 8 ರಿಂದ ಮಧ್ಯಾಹ್ನ 1ರವರೆಗೆ ನಿಗದಿ ಪಡಿಸಲಾಗುತ್ತಿತ್ತು. ಆದರೆ, ಕಳೆದ ವರ್ಷದಿಂದ ಈ ಪದ್ಧತಿ ನಿಲ್ಲಿಸಲಾಗಿದ್ದು, ಜನರು ಅನಿವಾರ್ಯವಾಗಿ ಕೆಲಸ ಕಾರ್ಯಗಳಿಗಾಗಿ ಹೊರಗೆ ಓಡಾಡುವಂತಾಗಿದೆ.

ಕೆಂಡದಂತಹ ಬಿಸಿಲು

ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರದ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 43 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕ ತಾಪಮಾನ ದಾಖಲಾಗಿದ್ದು, ಮಾನ್ವಿ ತಾಲೂಕಿನ ಹಾಲಾಪುರದಲ್ಲಿ 43.9 ಡಿಗ್ರಿ ಸೆಲ್ಸಿಯಸ್, ರಾಯಚೂರು ತಾಲೂಕಿನ ಚಂದ್ರಬಂಡಾ ಸೇರಿ ಹಲವೆಡೆ 43.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಶನಿವಾರವೂ ಬಿಸಿಲ ಪ್ರಖರತೆ ಮುಂದುವರಿದಿದ್ದು, ರಾಯಚೂರು ತಾಲೂಕಿನ ದೇವಸುಗೂರಿನಲ್ಲಿ 43 ಡಿಗ್ರಿ ಸೆಲ್ಸಿಯಸ್, ಸಿರವಾರ ತಾಲೂಕಿನ ಕಲ್ಲೂರು ಮತ್ತು ಮಾನ್ವಿಯಲ್ಲಿ 42.9, ಮಾನ್ವಿ ತಾಲೂಕಿನ ಕುರ್ಡಿ ಹಾಗೂ ರಾಯಚೂರು ತಾಲೂಕಿನ ಚಂದ್ರಬಂಡಾದಲ್ಲಿ 42.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಬಿಸಿಲಿನ ಪ್ರಖರತೆ ಜತೆಗೆ ಬಿಸಿಗಾಳಿ ಬೀಸುತ್ತಿರುವುದು ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ. ಅದರಲ್ಲೂ ಚಿಕ್ಕ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುವಂತಾಗಿದೆ. ಗುಡಿಸಲು ಮತ್ತು ಟಿನ್ ಶೆಡ್‌ನ ಮನೆಯಲ್ಲಿರುವವರು ಹೆಚ್ಚಿನ ಸಮಸ್ಯೆಗೆ ಗುರಿಯಾಗುತ್ತಿದ್ದಾರೆ.ಜನರು ತಂಪು ಪಾನೀಯ ಮೊರೆ ಹೋಗುತ್ತಿದ್ದು, ಮಧ್ಯಾಹ್ನ ರಸ್ತೆಗಳು ಬಣಗುಡುತ್ತಿವೆ. ಸರ್ಕಾರಿ ಬಸ್‌ಗಳಲ್ಲಿ ಮಧ್ಯಾಹ್ನ ಪ್ರಯಾಣಿಕರ ಸಂಖ್ಯೆಯೂ ಕಡಿಮೆಯಾಗಿದೆ. ವಿಜ್ಞಾನಿಗಳ ಪ್ರಕಾರ ಇನ್ನೂ ಕೆಲ ಕಾಲ ತಾಪಮಾನದಲ್ಲಿನ ಏರಿಕೆ ಮುಂದುವರಿಯಲಿದ್ದು, ಜನರು ಮಕ್ಕಳು ಮತ್ತು ಹಿರಿಯರನ್ನು ಬಿಸಿಲಿನ ತಾಪದಿಂದ ತಪ್ಪಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಕ್ಕಳ ಮೇಲೆ ದುಷ್ಪರಿಣಾಮ

ಮಕ್ಕಳ ಮೇಲೆ ದುಷ್ಪರಿಣಾಮಬಿಸಿಲ ಪ್ರಖರತೆ ಹೆಚ್ಚಾಗಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಚಿಕನ್‌ಫಾಕ್ಸ್, ತಟ್ಟು, ಗಣಜಿಲಿ, ಸನ್ ಸ್ಟ್ರೋಕ್ ಮುಂತಾದ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಪ್ರಮುಖವಾಗಿ ಕಳೆದ 15 ದಿನಗಳಿಂದ ತಟ್ಟು, ಗಣಜಿಲಿ ರೋಗದಿಂದ ಹೆಚ್ಚಿನ ಮಕ್ಕಳು ಆಸ್ಪತ್ರೆಗೆ ಸೇರುತ್ತಿದ್ದಾರೆ. ವಾಂತಿ-ಭೇದಿ ಹೆಚ್ಚಾಗಿ ಕಂಡು ಬರುತ್ತಿದೆ. ವೈದ್ಯರ ಪ್ರಕಾರ ಕರೊನಾ ಕಾರಣಕ್ಕೆ ಪಾಲಕರು ಮಕ್ಕಳಿಗೆ ನಿಗದಿತ ಲಸಿಕೆ ಹಾಕಿಸದಿರುವುದರಿಂದ ಮಕ್ಕಳಲ್ಲಿ ಈಗ ವಿವಿಧ ರೋಗಗಳು ಕಾಣಿಸಿಕೊಳ್ಳುವಂತಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲೂ ನವಜಾತ ಶಿಶುಗಳಲ್ಲಿ ಹೆಚ್ಚಿನ ತೊಂದರೆ ಕಂಡು ಬರುತ್ತಿದ್ದು, ಪಾಲಕರು ಮುಂಜಾಗ್ರತೆ ಕ್ರಮಕೈಗೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net