ಕೇಂದ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ತಿಳಿಸಿ

mysore
Published on

ಮೈಸೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ಜತೆಗೆ, ನರೇಂದ್ರ ಮೋದಿ ಸರ್ಕಾರದ ಆಡಳಿತದ ಕಾರ್ಯಕ್ರಮಗಳನ್ನೂ ಮನವರಿಕೆ ಮಾಡಿಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಸಂಘಟನಾ ಪ್ರಧಾನ ಕಾರ್ಯದರ್ಶಿ ಜಿ.ವಿ.ರಾಜೇಶ್ ಕಾರ್ಯಕರ್ತರಿಗೆ ತಿಳಿಸಿದರು.


ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ನಗರ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದರು.

ನರೇಂದ್ರ ಮೋದಿ ವರ್ಚಸ್ಸು, ಆಡಳಿತದಲ್ಲಿ ಬದಲಾವಣೆ, ಕ್ರಾಂತಿಕಾರಕ ಯೋಜನೆಗಳು, ಅಯೋಧ್ಯೆದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಮೊದಲಾದ ಕಾರಣದಿಂದ ದೇಶದಲ್ಲಿ ಪಕ್ಷಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಿದೆ.

ಆದರೆ, ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅನೇಕ ಸವಾಲುಗಳಿವೆ. ಪಕ್ಷದ ಕಾರ್ಯಕರ್ತರು, ಮುಖಂಡರು ಮೈಮರೆಯಬಾರದು. ಕಾಂಗ್ರೆಸ್ ನಾಯಕರು ಸ್ಥಳೀಯ ವಿಷಯಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರದ ಸಾಧನೆಯನ್ನು ಜನರಿಗೆ ವಿವರಿಸಬೇಕು ಎಂದರು.


ಆರ್ಥಿಕ ಪರಿಸ್ಥಿತಿಯನ್ನು ವಿಶ್ವದ 3ನೇ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ 2024ರಲ್ಲಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಮಂತ್ರಿಯಾಗಿ ಮಾಡಬೇಕಾಗಿದೆ. ದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಹಣಬಲ, ಜಾತಿ ಬಲ, ತೋಳು ಬಲದಲ್ಲಿ ರಾಜಕಾರಣ ಇತ್ತು. ದೇಶದಲ್ಲಿ ಸಂಘಟನೆಯ ಮೂಲಕ ರಾಜಕೀಯ ಮಾಡಬಹುದು ಎಂಬುದನ್ನು ಶ್ಯಾಮಪ್ರಕಾಶ್ ಮುಖರ್ಜಿ ಬಿಜೆಪಿ ಕಾರ್ಯಕರ್ತರಿಗೆ ತೋರಿಸಿಕೊಟ್ಟರು.

ಮೋದಿ ಅವರು ಕಾರ್ಯಕರ್ತರು ತಲೆ ತಗ್ಗಿಸುವಂತಹ ಆಡಳಿತ ನೀಡಿಲ್ಲ. ಹೀಗಾಗಿ, ಎಲ್ಲೆಡೆ ಕಾರ್ಯಕರ್ತರು ಮೋದಿಯವರ ಪರ ಹೆಮ್ಮೆಯಿಂದ ಮತ ಕೇಳುವ ಪರಿಸ್ಥಿತಿ ಇದೆ ಎಂದು ಹೇಳಿದರು.


2014ಕ್ಕಿಂತ ಮೊದಲು ದೇಶದಲ್ಲಿ ಭಯದ ವಾತಾವರಣವಿತ್ತು. ಎಲ್ಲಿ, ಯಾವಾಗ ಬಾಂಬ್ ಸ್ಫೋಟಿಸುತ್ತದೋ ಎಂಬ ಆತಂಕವಿತ್ತು. ಆದರೆ, ಮೋದಿ ಸರ್ಕಾರ ಬಂದ ಬಳಿಕ ಇದು ನಿವಾರಣೆಯಾಗಿದ್ದು, ಭದ್ರತೆ ಕುರಿತು ಕ್ರಮ ಕೈಗೊಂಡಿದೆ. ದೀನ ದಯಾಳ್ ಅವರು ಕೊಟ್ಟ ಅಂತ್ಯೋದಯದ ಕಲ್ಪನೆಯಲ್ಲಿ ಕೈಗೊಂಡ ಕಾರ್ಯಕ್ರಮದಿಂದಾಗಿ ದೇಶದ ಬಡವರ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ. ರೈತರು, ಬಡವರ ಅಭಿವೃದ್ಧಿಯಾದರೆ ದೇಶಾಭಿವೃದ್ಧಿ ಸಾಧ್ಯ. ಅದಕ್ಕಾಗಿ ಮುಕ್ತ ಮಾರುಕಟ್ಟೆ ಅವಕಾಶ ಮಾಡಿಕೊಟ್ಟಿತು. ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದರು.


ಈ ಹಿಂದೆ ಭಾರತ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾವುದೇ ಒಂದು ಅಚಲ ನಿಲುವು ಪ್ರಕಟಿಸದೆ ತಟಸ್ಥ ನೀತಿ ಅನುಸರಿಸುತ್ತಿತ್ತು. ಆದರೆ, ಇದೀಗ ಜಾಗತಿಕ ಮಟ್ಟದಲ್ಲಿ ವಿಶ್ವದ ಗಮನ ಸೆಳೆಯುವ ನೀತಿಯನ್ನು ಭಾರತ ಅನುಸರಿಸುತ್ತಿದೆ. ಗೃಹ ಸಚಿವ ಅಮಿತ್ ಷಾ ಅವರು ಇತ್ತೀಚೆಗೆ ಬ್ರಿಟಿಷ್ ಕಾಲದ ಕಾನೂನುಗಳಿಗೆ ತಿದ್ದುಪಡಿ ಮಾಡಿದ್ದಾರೆ. ಇದರಿಂದ ಈ ಹಿಂದೆ ಸಂವಿಧಾನಕ್ಕೆ ಆಗುತ್ತಿದ್ದ ಅಪಚಾರ ತಡೆಗಟ್ಟಿದಂತಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net