

ಗಜೇಂದ್ರಗಡ: ಮಾಜಿ ಸಚಿವ ಕಳಕಪ್ಪ ಬಂಡಿ ಅವರ ಕಚೇರಿಯಲ್ಲಿ ಶುಕ್ರವಾರ ರೋಣ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠದಿಂದ ಶಂಖನಾದ ಅಭಿಯಾನದ ಪೂರ್ವಭಾವಿ ಸಭೆ ಜರುಗಿತು.
ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸಂತೋಷ ಅಕ್ಕಿ ಮಾತನಾಡಿ, 2024ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 9 ವರ್ಷಗಳ ಸಾಧನೆಗಳನ್ನು ಜನತೆಗೆ ತಿಳಿಸಲು ದೇಶಾದ್ಯಂತ ಶಂಖನಾದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಸಾಧನೆಗಳನ್ನು ದೇಶದ ಪ್ರತಿಯೊಬ್ಬ ಪ್ರಜೆಗೂ ತಲುಪಿಸುವಲ್ಲಿ ಕಾರ್ಯಕರ್ತರು ಶ್ರಮಿಸಬೇಕು ಎಂದು ಕರೆ ನೀಡಿದರು.
ಮಾಜಿ ಸಚಿವ ಕಳಕಪ್ಪ ಬಂಡಿ ಮಾತನಾಡಿ, 2024ರಲ್ಲಿ ಮತ್ತೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದೆ. ಪ್ರತಿಯೊಬ್ಬ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಬೇಕು ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮೆಣಸಗಿ, ಉಮೇಶ ಮಲ್ಲಾಪುರ ಮಾತನಾಡಿದರು. ಮುತ್ತಣ್ಣ ಕಡಗದ, ರಾಜೇಶ ಅರಕಾಲ್, ಉಮೇಶ ಚನ್ನುಪಾಟೀಲ, ಅರುಣ ಮಠದ, ಶ್ರೀನಿವಾಸ ಸವದಿ, ಮುತ್ತಣ್ಣ ಚಟ್ಟೇರ, ವಿಜಯ ರಾಯಬಾಗಿ, ಇತರರಿದ್ದರು.