

ಹುಬ್ಬಳ್ಳಿ : ಅಂಗನವಾಡಿ ಆಹಾರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದ ಪ್ರಮುಖ ಆರೋಪಿಯ ಬಂಧನ ಮಾಡದಿರುವುದಕ್ಕೆ ಇರುವ ಒತ್ತಡವನ್ನು ಹು-ಧಾ ಪೊಲೀಸ್ ಆಯುಕ್ತರು ಬಹಿರಂಗ ಪಡಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮುಖ ಆರೋಪಿಯ ಬಂಧನಕ್ಕೆ ಲುಕ್ಔಟ್ ನೋಟಿಸ್ ಹೊರಡಿಸಿರುವುದು ಅಚ್ಚರಿ ತಂದಿದೆ. ಲುಕ್ಔಟ್ ನೋಟಿಸ್ ಹೊರಡಿಸಲು ಆರೋಪಿ ಪಾಕಿಸ್ತಾನಕ್ಕೆ ಪರಾರಿಯಾಗಿದ್ದಾಳೆಯೇ ? ಎಂದು ಪ್ರಶ್ನಿಸಿದರು.
ಈ ಪ್ರಕರಣ ನಡೆದು 20 ದಿನಗಳು ಕಳೆದರೂ ಇನ್ನೂ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದ 32 ಜನರನ್ನು ಬಂಧಿಸಿರುವ ಪೊಲೀಸರು, ಪ್ರಮುಖ ಆರೋಪಿ ಕಣ್ಣೆದುರು ಇದ್ದರೂ ಬಂಧಿಸಲಿಲ್ಲ. ಇದು ಪೊಲೀಸ್ ಇಲಾಖೆಯ ವೈಫಲ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪ್ರಮುಖ ಆರೋಪಿಯ ಬಂಧನಕ್ಕೆ ಇರುವ ಒತ್ತಡ ಬಹಿರಂಗ ಪಡಿಸುವಂತೆ ಶಾಸಕ ಪ್ರಸಾದ ಅಬ್ಬಯ್ಯ ಅವರೂ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದಾರೆ. ಆರೋಪಿಯ ಫೋನ್ ಕಾಲ್ ಪರಿಶೀಲಿಸಿದರೆ ಒತ್ತಡ ಹೇರಿದ ವ್ಯಕ್ತಿ ಯಾರೆಂಬುದು ಬಹಿರಂಗಗೊಳ್ಳಲಿದೆ ಎಂದು ಹೇಳಿದರು.
ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಇಬ್ಬರು ಸಚಿವರ ಹೆಸರುಗಳು ಕೇಳಿಬರುತ್ತಿರುವುದು ಗಮನಕ್ಕೆ ಬಂದಿದೆ. ಈ ಪ್ರಕರಣದಲ್ಲಿ ಕೇಂದ್ರದ ಸಚಿವರೇ ಇರಲಿ ಅಥವಾ ರಾಜ್ಯದ ಸಚಿವರೇ ಇರಲಿ, ಯಾರೇ ತಪು್ಪ ಮಾಡಿದರೂ ಶಿಕ್ಷೆಯಾಗಬೇಕು ಎಂದು ಹೇಳಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಕರೆದಿದ್ದ ಔತಣಕೂಟದಲ್ಲಿ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ ಹಾಗೂ ಶಿವರಾಮ ಹೆಬ್ಬಾರ ಅವರು ಯಾವ ಕಾರಣಕ್ಕೆ ಪಾಲ್ಗೊಂಡಿದ್ದರು ಎಂಬುದು ಗೊತ್ತಿಲ್ಲ. ರಾಜ್ಯ ಬಿಜೆಪಿಯಲ್ಲಿ ಭಿನ್ನಮತ ಇಲ್ಲ. ಕೆಲವು ಭಿನ್ನಾಭಿಪ್ರಾಯಗಳಿದ್ದು, ಈ ತಿಂಗಳ ಅಂತ್ಯದಲ್ಲಿ ಎಲ್ಲವೂ ಸರಿ ಹೋಗಲಿವೆ ಎಂದು ಉತ್ತರಿಸಿದರು.