

ಬೆಳಗಾವಿ: ಟೆಲಿಗ್ರಾಂ ಇನ್ವೆಸ್ಟ್‌ಮೆಂಟ್ ಹೆಸರಿನಲ್ಲಿ ಮಹಿಳೆಯರಿಗೆ ವಂಚನೆ ಮಾಡುತ್ತಿದ್ದ ಜಾಲ ಭೇದಿಸಿರುವ ಕ್ರೈಂ, ಎಕನಾಮಿಕ್ ಅಫೆನ್ಸ್ ಮತ್ತು ನಾರ್ಕೋಟಿಕ್ಸ್ (ಸಿಇಎನ್) ಠಾಣೆ ಪೊಲೀಸರು ಮೋಸ ಹೋದವರಿಗೆ ಮರಳಿ ಹಣ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.
ರಾಯಬಾಗದ ಡಾ.ಶಿಲ್ಪಾ ಎಸ್., ನಿಪ್ಪಾಣಿಯ ಆಶಾ ಕೆ. ಎಂಬುವವರು ವಂಚನೆಗೆ ಒಳಗಾದ ಮಹಿಳೆಯರು. ನಾಲ್ಕೆದು ತಿಂಗಳಿಂದ ಟೆಲಿಗ್ರಾಂ ಆ್ಯಪ್ ಮೂಲಕ ಚಾಟಿಂಗ್ ಮಾಡಿದ್ದ ವಂಚಕರ ಗ್ಯಾಂಗ್ ಹಣ ದ್ವಿಗುಣಗೊಳಿಸುವುದಾಗಿ ನಂಬಿಸಿ ಇಬ್ಬರು ವಿದ್ಯಾವಂತ ಮಹಿಳೆಯಿರಿಂದ ಬರೋಬ್ಬರಿ 45 ಲಕ್ಷ ರೂ. ಹಣವನ್ನು 21 ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿಸಿಕೊಂಡಿದ್ದರು. ಮರಳಿ ಹಣ ನೀಡಿರಲಿಲ್ಲ. ನಂತರ ಮೋಸ ಹೋದದ್ದು ತಿಳಿದು ಮಹಿಳೆಯರು ಸಿಇಎನ್ ಠಾಣೆಗೆ ದೂರು ನೀಡಿದ್ದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡು ಸಿಇಎನ್ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಆರ್.ಗಡ್ಡೇಕರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ವಂಚಕರ 21 ಬ್ಯಾಂಕ್ ಖಾತೆಗಳನ್ನು ಫ್ರೀಜ್ (ಸ್ಥಗಿತ) ಮಾಡಿದ್ದಾರೆ. ಬಳಿಕ ಆ ಖಾತೆಗಳಿಂದ 92 ಲಕ್ಷ ರೂ. ಜಪ್ತಿ ಮಾಡಿದ್ದಾರೆ. ಬಳಿಕ ವಂಚನೆಗೆ ಒಳಗಾಗಿದ್ದ ಡಾ.ಶಿಲ್ಪಾ 18.41 ಲಕ್ಷ ರೂ. ಹಾಗೂ ಆಶಾ.ಕೆ ಅವರಿಗೆ 27.74 ಲಕ್ಷ ರೂ. ಸೇರಿ ಒಟ್ಟು 45 ಲಕ್ಷ ರೂ. ಹಣ ವಾಪಸ್ ನೀಡಿದ್ದಾರೆ. ಇನ್ನೂ ವಂಚಿಕರ ಬ್ಯಾಂಕ್ ಖಾತೆಗಳಲ್ಲಿ ಉಳಿದಿರುವ 71 ಲಕ್ಷ ರೂ. ಹಣ ಮೂಲದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಹೈಪ್ರೋೈಲ್ ಮಹಿಳೆಯರೇ ಟಾರ್ಗೆಟ್: ಆನ್‌ಲೈನ್ ವಂಚನೆ ಗ್ಯಾಂಗವು ಮಹಿಳಾ ವೈದ್ಯರು, ಉದ್ಯಮಿಗಳು ಸೇರಿದಂತೆ ಹೈಪ್ರೋೈಲ್ ಹೊಂದಿರುವ ಮಹಿಳೆಯರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುತ್ತಾರೆ. ಮೊದಲಿಗೆ ಟೆಲಿಗ್ರಾಂ ಆ್ಯಪ್‌ನಲ್ಲಿ ಅಪರಿಚಿತ ನಂಬರಿನಿಂದ ಮೆಸೇಜ್ ಬರುತ್ತದೆ. ಆನ್‌ಲೈನ್ ಕೆಲಸ ಕೊಡಿಸುವುದಾಗಿ ನಂಬಿಸಿ ಚಾಟಿಂಗ್ ಮಾಡುತ್ತಾರೆ. ದಿನಕ್ಕೊಂದರಂತೆ ಬೇರೆ ಬೇರೆ ಟಾಸ್ಕ್ ನೀಡಿ ಹಾಕಿದ ಹಣಕ್ಕೆ ಡಬಲ್ ಹಣ ನೀಡುವ ಆಮಿಷ ಒಡ್ಡುತ್ತಾರೆ. ಹೀಗೆ ಮೊದಲ ಎರಡು-ಮೂರು ಬಾರಿ ಹಾಕಿದ ಹಣಕ್ಕೆ ಡಬಲ್ ಹಣ ನೀಡುತ್ತಾರೆ ಕೂಡ. ನಂತರ ಇನ್ನಷ್ಟು ಇನ್‌ವೆಸ್ಟ್‌ಮೆಂಟ್ ಮಾಡಿದರೆ ಒಳ್ಳೆಯ ಹಣ ಬರುತ್ತದೆ ಎಂದು ಖದೀಮರು ನಂಬಿಸುತ್ತಾರೆ. ಇದಕ್ಕಾಗಿಯೇ ವಿವಿಧ ಬ್ಯಾಂಕ್‌ಗಳಲ್ಲಿ ಖಾತೆ ತೆರೆದಿರುತ್ತಾರೆ. ಈ ಗ್ಯಾಂಗ್ ವ್ಯವಸ್ಥಿತವಾಗಿಯೇ ಕಾರ್ಯನಿರ್ವಹಿಸುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.