

ಕೊಲ್ಹಾರ: ತಾಲೂಕಿನ ತೆಲಗಿ ಬಳಿ ರೈಲ್ವೆ ಇಲಾಖೆ ನಿರ್ಮಿಸಿರುವ ಕೆಳ ಸೇತುವೆ ಅವೈಜ್ಞಾನಿಕವಾಗಿದೆ ಎಂಬ ಸಾರ್ವಜನಿಕರ ದೂರಿನನ್ವಯ ಲೋಕೊಪಯೋಗಿ ಇಲಾಖೆ ಇಂಜಿನಿಯರ್ ಸೋಮನಾಥ ಕೊಳಗೇರಿ ಹಾಗೂ ಮೆಟ್ರೋದ ಮಾಜಿ ಅಪರ ಮಹಾಪ್ರಬಂಧಕ ನಾಗಪ್ಪ ಹೆಬ್ಬಿ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ರೈಲ್ವೆ ಕೆಳ ಸೇತುವೆ 5.50ಮೀ. ಎತ್ತರ ಇರಬೇಕು. ಆದರೆ, 3.95ಮೀ. ಎತ್ತರ ಇದೆ. ಸೇತುವೆ ಎತ್ತರ ಕಡಿಮೆ ಇರುವುದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಸಮಸ್ಯೆ ಕುರಿತು ಸಾಕಷ್ಟು ಸಲ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ ಎಂದು ತೆಲಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅರವಿಂದ ಕೊಪ್ಪದ ಅಧಿಕಾರಿ ಬಳಿ ಅಳಲು ತೋಡಿಕೊಂಡರು.
ಈ ಕುರಿತು ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಬೇಕಾಗುತ್ತದೆ ಎಂದು ಕರವೇ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹಾರಿವಾಳ ಮತ್ತು ಅಖಂಡ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ರಮೇಶ ಬಾಲಗೊಂಡ, ರವಿ ಗೊಳಸಂಗಿ ತಿಳಿಸಿದ್ದಾರೆ.
ಕೊಲ್ಹಾರ ತಾಳಿಕೋಟೆ ರಾಜ್ಯ ಹೆದ್ದಾರಿಗೆ ತೆಲಗಿ ಬಳಿ ನಿರ್ಮಿಸಿದ ರೈಲ್ವೆ ಕೆಳ ಸೇತುವೆ ಅವೈಜ್ಞಾನಿಕವಾಗಿದ್ದು, ಸೇತುವೆ ಎತ್ತರ ಹೆಚ್ಚಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. - ನಾಗಪ್ಪ ಹೆಬ್ಬಿ, ಮಾಜಿ ಅಪರ ಮಹಾಪ್ರಬಂಧಕ, ಮೆಟ್ರೋ