

ಉಡುಪಿ: ಮುಂಬೈಯಿಂದ ಮಂಡ್ಯಕ್ಕೆ ಖರ್ಜೂರ ಸಾಗಿಸುತ್ತಿದ್ದ ಲಾರಿಯಲ್ಲಿ ಆಗಮಿಸಿದ್ದ ಕರೊನಾ ಪಾಸಿಟಿವ್ ವ್ಯಕ್ತಿಯ ಸಂಪರ್ಕ ಶಂಕೆ ಹಿನ್ನೆಲೆಯಲ್ಲಿ ತೆಕ್ಕಟ್ಟೆ ಪೆಟ್ರೋಲ್ ಬಂಕ್ ಸಿಬ್ಬಂದಿ ಮತ್ತು ಸಾಸ್ತಾನ ಟೋಲ್‌ಗೇಟ್ ಸಿಬ್ಬಂದಿಯ ಗಂಟಲು ದ್ರವ ಮಾದರಿ ಪರೀಕ್ಷಿಸಲಾಗಿದ್ದು, ಶುಕ್ರವಾರ ಎಲ್ಲ 18 ಮಂದಿಯ ವರದಿಗಳು ನೆಗೆಟಿವ್ ಬಂದಿದೆ.
28 ದಿನ ಯಾವುದೇ ಪಾಸಿಟಿವ್ ಪ್ರಕರಣಗಳಿಲ್ಲದೆ ಉಡುಪಿ ಜಿಲ್ಲೆ ಹಸಿರು ವಲಯಕ್ಕೆ ಸೇರ್ಪಡೆಗೊಂಡಿದೆ. ಈ ಮಧ್ಯೆ ಮಂಡ್ಯದ ಪಾಸಿಟಿವ್ ವ್ಯಕ್ತಿ ತೆಕ್ಕಟ್ಟೆ ಪೆಟ್ರೋಲ್ ಬಂಕ್‌ನಲ್ಲಿ ಸ್ನಾನ ಮಾಡಿ, ಆಹಾರ ತಯಾರಿಸಿ ಸೇವಿಸಿದ್ದರು ಎಂಬ ವರದಿಯಿಂದ ಜಿಲ್ಲೆಯ ಜನರು ಆತಂಕಕ್ಕೊಳಗಾಗಿದ್ದರು. ಈಗ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ. 18 ಮಂದಿಯನ್ನು 14 ದಿನಗಳ ಇನ್‌ಸ್ಟಿಟ್ಯೂಷನ್ ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, 4 ದಿನದಲ್ಲಿ ಮತ್ತೊಮ್ಮೆ ಗಂಟಲು ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ.
47 ವರದಿ ನೆಗೆಟಿವ್: ಶುಕ್ರವಾರ ಒಟ್ಟು 47 ಮಂದಿಯ ವರದಿ ಆರೋಗ್ಯ ಇಲಾಖೆ ಕೈಸೇರಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಇನ್ನೂ 47 ವರದಿ ಬರಲು ಬಾಕಿ ಇದೆ. 18 ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಇವರಲ್ಲಿ ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ 4 ಮಂದಿ, ಕರೊನಾ ಶಂಕಿತ 2, ಅನಾರೋಗ್ಯ ಬಾಧಿತರು 10, ಕರೊನಾ ಹಾಟ್‌ಸ್ಪಾಟ್‌ಗೆ ಭೇಟಿ ನೀಡಿದ ಇಬ್ಬರು ಸೇರಿದ್ದಾರೆ. 3 ಮಂದಿ ಐಸೋಲೇಶನ್‌ಗೆ ದಾಖಲಾಗಿದ್ದಾರೆ. 6 ಮಂದಿ ಬಿಡುಗಡೆಯಾಗಿದ್ದಾರೆ. 36 ಮಂದಿ 28 ದಿನದ ನಿಗಾವಣೆ ಮತ್ತು 71 ಮಂದಿ 14 ದಿನದ ನಿಗಾ ಅವಧಿ ಪೂರೈಸಿದ್ದಾರೆ.
ಕಾಸರಗೋಡು ನಾಲ್ವರು ಗುಣಮುಖ
ಕಾಸರಗೋಡು: ಕೇರಳದಲ್ಲಿ ಶುಕ್ರವಾರ ಕರೊನಾ ಪ್ರಕರಣ ದಾಖಲಾಗಿಲ್ಲ. ರಾಜ್ಯದಲ್ಲಿ ಒಂಬತ್ತು ಮಂದಿ ವೈರಸ್‌ನಿಂದ ಮುಕ್ತಿ ಹೊಂದಿದ್ದು, ಆಸ್ಪತ್ರೆಗಳಿಂದ ಮನೆಗೆ ತೆರಳಿದ್ದಾರೆ. ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಯಲ್ಲಿ ತಲಾ ನಾಲ್ವರು ಹಾಗೂ ಎರ್ನಾಕುಳಂನಲ್ಲಿ ಒಬ್ಬರು ಗುಣಮುಖರಾದವರು. ರಾಜ್ಯದಲ್ಲಿ ಕೋವಿಡ್-19 ಬಾಧಿಸಿರುವವರಲ್ಲಿ ಇದುವರೆಗೆ 392 ಮಂದಿ ಗುಣಮುಖರಾಗಿದ್ದು, ಪ್ರಸಕ್ತ 102 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯಲ್ಲಿ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮೂವರು ಮತ್ತು ಕಾಞಂಗಾಡ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಬ್ಬರು ಗುಣಮುಖರಾಗಿದ್ದಾರೆ.