

ಸಿರಗುಪ್ಪ: ಸಾರಿಗೆ ಸೌಲಭ್ಯ ಕಲ್ಪಿಸಲು ಆಗ್ರಹಿಸಿ ವಿದ್ಯಾರ್ಥಿಗಳು, ಪಾಲಕರು, ಗ್ರಾಮಸ್ಥರು ತಾಲೂಕಿನ ತೆಕ್ಕಲಕೋಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಸಂಚಾರ ತಡೆದು ಸೋಮವಾರ ಪ್ರತಿಭಟನೆ ನಡೆಸಿದರು.
ಹಲವು ದಿನಗಳಿಂದ ಗ್ರಾಮಕ್ಕೆ ಸರಿಯಾಗಿ ಬಸ್‌ಗಳು ಬರುತ್ತಿಲ್ಲ. ಬಂದ ಬಸ್‌ಗಳು ನಿಲುಗಡೆಯಾಗದೆ ಸಂಚರಿಸುತ್ತಿವೆ. ಹಾಗಾಗಿ ಸಮಯಕ್ಕೆ ಸರಿಯಾಗಿ ಶಾಲಾ, ಕಾಲೇಜ್‌ಗಳಿಗೆ ತೆರಳು ಸಮಸ್ಯೆಯಾಗುತ್ತಿದೆ. ಕಾಲೇಜುಗಳು ಬೆಳಗ್ಗೆ 8-30ಕ್ಕೆ ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳು ಬಸ್ ನಿಲ್ದಾಣಕ್ಕೆ ಬೆಳಗ್ಗೆ 7 ಗಂಟೆಗೆ ಬಂದರೆ ವಾಹನಗಳು 9, 10ಕ್ಕೆ ಬರುತ್ತವೆ. ಹೀಗಾಗಿ ಶಿಕ್ಷಣಕ್ಕೆ ಹೊಡೆತ ಬೀಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಸ್ಯೆ ಕುರಿತು ಡಿಪೋ ಮ್ಯಾನೇಜರ್‌ಗೆ ಮತ್ತು ತಹಸೀಲ್ದಾರ್ ಗಮನಕ್ಕೆ ತಂದರೂ ಪ್ರಯೋಜವಾಗಿಲ್ಲ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದರು. ಸ್ಥಳಕ್ಕೆ ಪೊಲೀಸರು ಬಂದು ವಿದ್ಯಾರ್ಥಿಗಳ ಮನವಲಿಸುವಲ್ಲಿ ಯಶಸ್ವಿಯಾಗಿದ್ದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಯಿತು.
ವಿದ್ಯಾರ್ಥಿಗಳಾದ ಸಮೀರ್, ವಿಶ್ವನಾಥ, ಭವಾನಪ್ಪ, ಕೆ.ನಿತಿನ್, ಮಹಾಂತೇಶ, ಅಜಯ್‌ಕುಮಾರ್, ಹುಸೇನ್, ನವೀನ್, ಶಿವಕುಮಾರ್, ಶ್ರೀನಿವಾಸ, ಎಂ.ಗೌಸ್ ಇನ್ನಿತರರು ಇದ್ದರು.