ಸರ್ಕಾರಿ ನೌಕರರ ಸಂಘದ ತೇಜೋವಧೆ: ಕ್ರಮಕ್ಕೆ ಮನವಿ

23adarshkdga3
Published on

ಮಡಿಕೇರಿ: ನೌಕರರ ಹಿತಕಾಯುತ್ತಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ, ಜಿಲ್ಲಾ, ತಾಲೂಕು ಘಟಕಗಳ ವಿರುದ್ಧ ಆಧಾರ ರಹಿತವಾಗಿ ಸಾಮಾಜಿಕ ಜಾಲತಾಣದಲ್ಲಿ ತೇಜೋವಧೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.


ಸಂಘದ ಜಿಲ್ಲಾಧ್ಯಕ್ಷ ಪೊನ್ನಚನ ಶ್ರೀನಿವಾಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವೆಂಕಟ್‌ರಾಜಾರವರಿಗೆ ಶನಿವಾರ ಮನವಿ ಸಲ್ಲಿಸಿದ ಸಂಘಟನೆಯ ಪ್ರಮುಖರು, ಸಂಘಟನೆಯ ವಿರುದ್ಧ ಸುಳ್ಳು ಆರೋಪ ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.


ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ೧೯೨೦ರಲ್ಲಿ ಸ್ಥಾಪನೆಯಾಗಿದ್ದು, ಸರ್ಕಾರಿ ಮಾನ್ಯತೆಯನ್ನು ಹೊಂದಿ ಸುಮಾರು ೫.೨೫ ಲಕ್ಷ ಸರ್ಕಾರಿ ನೌಕರರನ್ನು ಪ್ರತಿನಿಧಿಸುವ ರಾಷ್ಟ್ರದಲ್ಲಿಯೇ ಮಾದರಿ ಸಂಘಟನೆಯಾಗಿದೆ. ಸಂಘವು ರಾಜ್ಯಾದ್ಯಂತ ಎಲ್ಲಾ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದ್ದು, ರಾಜ್ಯಾದ್ಯಂತ ೨೦೦೦ಕ್ಕೂ ಹೆಚ್ಚಿನ ವಿವಿಧ ವೃಂದ ಸಂಘಗಳ ಸಂಯೋಜನೆಯನ್ನು ಹೊಂದಿದೆ. ಹಿಂದಿನ ಹಲವಾರು ಅಧ್ಯಕ್ಷರುಗಳ ಶ್ರಮದಿಂದ ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಪ್ರಸ್ತುತ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿಯವರ ಮಾರ್ಗದರ್ಶನದಲ್ಲಿ ಜಿಲ್ಲಾ, ತಾಲೂಕು ಘಟಕಗಳ ಪದಾಧಿಕಾರಿಗಳು ನೌಕರರ ಹಿತಕಾಯುವುದು, ಅವರ ನೋವುಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅಲ್ಲದೆ ಜಿಲ್ಲೆ, ತಾಲೂಕು ಮತ್ತು ಯೋಜನಾ ಶಾಖೆಯ ಸಂಘಟನೆಗಳು ಹಾಗೂ ಜಿಲ್ಲಾ, ತಾಲೂಕು ಘಟಕಗಳ ಅಧ್ಯಕ್ಷರು ಯಾವುದೇ ಫಲಾಪೇಕ್ಷೆ ಇಲ್ಲದೇ ನೌಕರರ ಹಿತರಕ್ಷಣೆಗಾಗಿ ಹಾಗೂ ಸಂಘದ ಸದಸ್ಯರ ಶ್ರೇಯೋಭಿವೃದ್ಧಿಗಾಗಿ ವೈಯಕ್ತಿಕ ಹಿತಾಸಕ್ತಿಯನ್ನ ಬದಿಗೊತ್ತಿ ಹಗಲು ರಾತ್ರಿಯೆನ್ನದೇ ಶ್ರಮಿಸಿದ್ದಾರೆ. ಆದರೆ, ಸಂಘಟನೆಯನ್ನು ದುಬರ್ಲಗೊಳಿಸುವ ದುರುದ್ದೇಶದಿಂದ ವಿವಿಧ ಇಲಾಖೆ ಕೆಲ ಅಧಿಕಾರಿಗಳು ರಾಜ್ಯ, ಜಿಲ್ಲಾ, ತಾಲೂಕು ಮತ್ತು ಯೋಜನಾ ಶಾಖೆಯ ಸಂಘನೆಗಳ ಹಾಗೂ ಅಧ್ಯಕ್ಷರುಗಳ ವಿರುದ್ಧ ಸತ್ಯಕ್ಕೆ ದೂರವಾದ ಆರೋಪಗಳನ್ನು ಮಾಡಿರುವುದೂ ಅಲ್ಲದೇ ದೂರಿನ ಪ್ರತಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಸಂಘಟನೆಯ ಘನತೆಗೆ ಮಸಿ ಬಳಿಯುವ ಕೆಲಸ ಮಾಡುವುದು ವಿಷಾಧನೀಯ ಎಂದರು.


ಸಂಘಟನೆ ಹಾಗೂ ಪದಾಧಿಕಾರಿಗಳ ವಿರುದ್ಧ ಸುಳ್ಳು ಆರೋಪ ಮಾಡಿರುವ ವಿವಿಧ ಇಲಾಖೆಯ ಐವರು ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.


ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಅರುಣ್ ಕುಮಾರ್, ಖಜಾಂಚಿ ರಾಜೇಶ್, ಹಿರಿಯ ಉಪಾಧ್ಯಕ್ಷ ಪಿ.ಎಂ.ಬಾಬು, ಉಪಾಧ್ಯಕ್ಷ ತ್ರಿಶೂಲ್, ಸಂಘಟನಾ ಕಾರ್ಯದರ್ಶಿ ಜಯಮ್ಮ, ಕ್ರೀಡಾ ಕಾರ್ಯದರ್ಶಿ ಬಿ.ಎಲ್.ಸಂದೇಶ್, ನಿರ್ದೇಶಕರುಗಳಾದ ನೀಲಕಂಠ, ಹರೀಶ್, ಮಧುಕರ್ ಮನವಿ ನೀಡುವ ಸಂದರ್ಭ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net