ತೇಜಸ್ವಿ ಸಾಹಿತ್ಯ ಕೃಷಿ ಚಿರನೂತನ

sri srava
ನೇರಳಕೊಡಿಗೆಯಲ್ಲಿ ಶ್ರಾವಣ ನುಡಿಸಿರಿ ಕಾರ್ಯಕ್ರಮವನ್ನು ತಾಲೂಕು ವರ್ತಕರ ಸಂಘದ ಡಿ.ಸಿ.ಶಂಕರಪ್ಪ ಉದ್ಘಾಟಿಸಿದರು.ಪ್ರಕಾಶ್, ಶಶಿಧರ್, ಬಿ.ಶಿವಶಂಕರ್ ಇತರರಿದ್ದರು.
Published on

ಶೃಂಗೇರಿ: ಕನ್ನಡ ಸಾಹಿತ್ಯ ಮತ್ತು ಚಿಂತನೆ ಮೇಲೆ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯ ಕೃಷಿ ಚಿರನೂತನ. ಜೀವನದಲ್ಲಿ ವಿಶಾಲತೆ, ಪರಿಸರ ಕಾಳಜಿ, ಜನಸಾಮಾನ್ಯರ ಕುರಿತು ಅವರಿಗಿದ್ದ ಪ್ರೀತಿ ಅನುಪಮ ಎಂದು ತಾಲೂಕು ಸಿರಿಗನ್ನಡ ವೇದಿಕೆ ಅಧ್ಯಕ್ಷ ಎಚ್.ಎ.ಪ್ರಕಾಶ್ ತಿಳಿಸಿದರು.

ನೇರಳಕೊಡಿಗೆ ಸಮಾಜಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಯರ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡ ಶ್ರಾವಣ ನುಡಿಸಿರಿ ಕಾರ್ಯಕ್ರಮದಲ್ಲಿ ಪೂರ್ಣಚಂದ್ರ ತೇಜಸ್ವಿ-ವಿಸ್ಮಯ ಪ್ರಪಂಚ ವಿಷಯದ ಕುರಿತು ಮಾತನಾಡಿದರು.
ಕನ್ನಡ ಭಾಷೆಯಲ್ಲಿ ಬರಹಗಾರನೊಬ್ಬನಿಗೆ ಸದಾ ಓದುಗ ಅಭಿಮಾನಿಗಳು ಇದ್ದೇ ಇರುತ್ತಾರೆ. ಶಿವರಾಮ ಕಾರಂತ, ಕುವೆಂಪು, ದ.ರಾ.ಬೇಂದ್ರೆ, ಯು.ಆರ್.ಅನಂತಮೂರ್ತಿ, ಲಂಕೇಶ್ ಅವರಂಥ ಶ್ರೀಮಂತ ಸಾಹಿತಿಗಳ ನಡುವೆ ಯುವ ಸಾಹಿತಿಗಳು ತೇಜಸ್ವಿ ಅವರ ಕೃತಿಗಳಿಂದ ಪ್ರೇರಣೆ ಪಡೆದಿದ್ದಾರೆ. ಅವರ ಅನುಭವದ ಸಾರ, ಬಹುಮುಖ ವ್ಯಕ್ತಿತ್ವ ಸರ್ವರಿಗೂ ಮಾದರಿ. ತೇಜಸ್ವಿ ಅವರ ಕರ್ವಾಲೋ, ಚಿದಂಬರ ರಹಸ್ಯ ಕಾದಂಬರಿ ಓದಿದಾಗ ಅದು ನಮ್ಮನ್ನು ನಿರಂತರ ಕಾಡುತ್ತಲೇ ಇರುತ್ತದೆ. ಅವರ ಸಾಹಿತ್ಯ, ಸಾಂಸ್ಕೃತಿಕ ಬಿಂಬಗಳು ಭಾಷೆಗೆ ಸಂಬಂಧಿಸಿದಂತೆ ಬಹುಮುಖ್ಯವಾದ ಅಂಶಗಳನ್ನು ತೆರೆದಿಡುವಲ್ಲಿ ಯಶಸ್ಸು ಕಂಡಿದೆ ಎಂದರು.
ತಾಲೂಕು ವರ್ತಕರ ಸಂಘದ ಅಧ್ಯಕ್ಷ ಡಿ.ಸಿ.ಶಂಕರಪ್ಪ ಮಾತನಾಡಿ, ತೇಜಸ್ವಿ ಅವರ ವ್ಯಕ್ತಿತ್ವ, ಸಾಹಿತ್ಯ, ವಿಚಾರಧಾರೆ ಕನ್ನಡ ಸಾಹಿತ್ಯ ಮತ್ತು ಚಿಂತನೆ ಮೇಲೆ ಬೀರಿದ ಪ್ರಭಾವ ಅನನ್ಯ. ಬರೆದಂತಹ ವಿಚಾರಗಳನ್ನು ಬದ್ಧತೆಯಿಂದ ಜೀವನದ ಉದ್ದಕ್ಕೂ ಆಚರಿಸಿದ ತೇಜಸ್ವಿ ನಾಡು ಕಂಡ ಶ್ರೇಷ್ಠ ಸಾಹಿತಿ. ಅವರ ಸಾಹಿತ್ಯದಲ್ಲಿ ಪ್ರಕೃತಿ ಪ್ರೇಮವಿದೆ. ರೈತರ ಹಾಗೂ ಜನಸಾಮಾನ್ಯರ ಬದುಕಿನ ವಾಸ್ತವ ಚಿತ್ರಣಗಳನ್ನು ಸಾಹಿತ್ಯದ ಮೂಲಕ ಪ್ರತಿಬಿಂಬಿಸಿದ ಸರಳ ವ್ಯಕ್ತಿತ್ವ ಸರ್ವರಿಗೂ ಪ್ರೇರಣೆ ಎಂದರು.
ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಎಮ್.ಆರ್.ಪ್ರಕಾಶ್, ವಿದ್ಯಾರ್ಥಿ ನಿಲಯದ ಮೇಲ್ವಿಚಾರಕ ಮಂಜುನಾಥ್, ಸಿರಿಗನ್ನಡ ವೇದಿಕೆ ಕಾರ್ಯದರ್ಶಿ ಮಂದಾರಾ, ಪಟ್ಟಣಸ ಸ.ಪ.ಪೂರ್ವ ಪ್ರೌಢಶಾಲಾ ವಿಭಾಗದ ಶಶಿಧರ್, ಸಾಹಿತಿ ಬಿ.ಶಿವಶಂಕರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net