ಎಂಪಿ ನಿಧಿಯಿಂದ ವಿಕ್ಟೋರಿಯಾ, ವಾಣಿ ವಿಲಾಸ ಆಸ್ಪತ್ರೆಗೆ ಆಂಬ್ಯುಲೆನ್ಸ್ ನೀಡಿದ ತೇಜಸ್ವಿ ಸೂರ್ಯ

ambulance
Published on

ಬೆಂಗಳೂರು: ಸ್ವಾತಂತ್ರ್ಯೋತ್ಸವ ಹಿನ್ನೆಲೆಯಲ್ಲಿ ನಗರದ ವಿಕ್ಟೋರಿಯಾ ಆಸ್ಪತ್ರೆ ಹಾಗೂ ವಾಣಿ ವಿಲಾಸ ಆಸ್ಪತ್ರೆಗೆ ತಲಾ ಒಂದು ಸುಸಜ್ಜಿತ ಆಂಬ್ಯುಲೆನ್ಸ್ ವಾಹನವನ್ನು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಹಸ್ತಾಂತರಿಸಿದ್ದಾರೆ.

ಮಂಗಳವಾರ ವಾಣಿ ವಿಲಾಸ ಆಸ್ಪತ್ರೆ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಆ್ಯಂಬುಲೆನ್ಸ್ ವಾಹನದ ಹಸ್ತಾಂತರ ಕಾರ್ಯ ನಡೆಯಿತು. ಸಂಸದರ ಕಚೇರಿ ಸಿಬ್ಬಂದಿಯವರು ಈ ವಾಹನಗಳನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಿದರು.

ತೇಜಸ್ವಿ ಸೂರ್ಯ ಅವರು ತಮ್ಮ ಸಂಸದರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ ಅಡಿಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರದ ಕಾರ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಹೀಗಾಗಿ ಅವರು ಆದ್ಯತೆಯ ಮೇರೆಗೆ ನಿಧಿ ಬಳಕೆ ಮಾಡುತ್ತಿದ್ದಾರೆ. ಆರ್ಥಿಕವಾಗಿ ಹಿಂದುಳಿದ, ಬಡ ಕುಟುಂಬಗಳಿಗೆ ಕಡಿಮೆ ದರದಲ್ಲಿ, ಉತ್ತಮ ಆರೋಗ್ಯ ಸೇವೆಗಳನ್ನು ಒದಗಿಸುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಆರೋಗ್ಯ ಸೇವೆಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ಸೇವೆಗಳನ್ನು ಪೂರೈಸುವ ನಿಟ್ಟಿನಲ್ಲಿ, ಪ್ರತಿ ನಿತ್ಯ ಕಾರ್ಯನಿರ್ವಹಿಸುವ 2 ಮೊಬೈಲ್ ಕ್ಲಿನಿಕ್‌ಗಳು ಈಗಾಗಲೇ ಸೇವೆಯಲ್ಲಿ ನಿರತವಾಗಿವೆ. ಇದರಿಂದ ಉಚಿತ ಆರೋಗ್ಯ ತಪಾಸಣೆ, ವೈದ್ಯರೊಂದಿಗೆ ಸಮಾಲೋಚನೆ, ಲ್ಯಾಬ್ ಟೆಸ್ಟ್, ಸಾಮಾನ್ಯ ಕಾಯಿಲೆಗಳಿಗೆ ಔಷಧಿ ಪೂರೈಕೆ ಸೇವೆ ಕೂಡ ಒದಗಿಸಲಾಗುತ್ತಿದೆ.

ಆರೋಗ್ಯ ಸೇವೆ ಸುಧಾರಣೆ ನಿಟ್ಟಿನಲ್ಲಿ, ಸಂಸದರ ನಿಧಿ ಮತ್ತು ಕಾರ್ಪೊರೇಟ್ ಸಂಸ್ಥೆಗಳ ಸಹಕಾರದೊಂದಿಗೆ ಜಯನಗರದ ಕೆಎಸ್‌ಆರ್‌ಟಿಸಿ ಆಸ್ಪತ್ರೆಯಲ್ಲಿ ನರೇಂದ್ರ ಮೋದಿ ಡಯಾಲಿಸಿಸ್ ಕೇಂದ್ರ ಪ್ರಾರಂಭಿಸಿದ್ದು, ಸಂಪೂರ್ಣ ಉಚಿತ ಸೇವೆ ನೀಡಲು ‘ನಮೋ ಡಯಾಲಿಸಿಸ್ ಕೇಂದ್ರ’ಕ್ಕೆ ಚಾಲನೆ ನೀಡಲಾಗಿದೆ. ಮೂಡಲಪಾಳ್ಯದಲ್ಲಿ ಎರಡು ಅನಿಮಲ್ ಆಂಬ್ಯುಲೆನ್ಸ್‌ಗಳಿಗೆ ಅನುದಾನ ಒದಗಿಸಲಾಗಿದ್ದು, ಶೀಘ್ರದಲ್ಲಿಯೇ ಸೇವೆಗೆ ಮುಕ್ತಗೊಳಿಸಲಾಗುವದು ಎಂದು ಸಂಸದರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಾಣಿವಿಲಾಸ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ. ಸವಿತಾ ಸಿ, ಸ್ಥಾನಿಯ ವೈದ್ಯಕೀಯ ಅಧಿಕಾರಿ ಡಾ. ಸಂತೋಷ್ ಹಾಗೂ ಸಂಸದರ ಕಚೇರಿಯ ಭಾನುಪ್ರಕಾಶ್, ವಿಶಾಲ್ ಬೋಹರಾ, ಅನಿಕೇತ್ ಜೆ, ಚೇತನ್ ಟಿ, ಶೇಖರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net