

ಬೆಂಗಳೂರು: ಬನಶಂಕರಿಯಲ್ಲಿ ನಮ್ಮ ಮೆಟ್ರೋ ನಿಲ್ದಾಣ ಹಾಗೂ ಬಿಎಂಟಿಸಿ ಬಸ್ ನಿಲ್ದಾಣಗಳ ನಡುವೆ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಕೈವಾಕ್ ನಿರ್ಮಿಸುವಂತೆ ಸಂಸದ ತೇಜಸ್ವಿ ಸೂರ್ಯ ಸೋಮವಾರ ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಮಾಡಿದ್ದಾರೆ.
ಬನಶಂಕರಿ ಪ್ರದೇಶವು ಸಂಚಾರದ ದೃಷ್ಟಿಯಿಂದ ಪ್ರಮುಖ ಜಂಕ್ಷನ್ ಆಗಿದೆ. ಆದರೆ ಗೊಂದಲ ಮೂಡಿಸುವ ಪಾದಚಾರಿ ರಸ್ತೆ ಹಾಗೂ ಸಂಚಾರ ಮಾರ್ಗಗಳಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ.
ಎರಡೂ ನಿಲ್ದಾಣಗಳನ್ನು ಸಂಪರ್ಕಿಸುವಂತೆ ಸ್ಕೈವಾಕ್ ನಿರ್ಮಾಣಕ್ಕೆ ಬೇಡಿಕೆಯಿದೆ. ಹೀಗಾಗಿ ಬಿಬಿಎಂಪಿ ಬಜೆಟ್ನಲ್ಲಿ ಅನುದಾನ ಒದಗಿಸಿ, ಜನರ ಬೇಡಿಕೆಯನ್ನು ಈಡೇರಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.