

ಮಡಿಕೇರಿ
ಪೂರ್ಣಚಂದ್ರ ತೇಜಸ್ವಿ ಅವರು ತಮ್ಮ ತಂದೆ ಕುವೆಂಪು ಅವರನ್ನು ಅನುಸರಿಸಲಿಲ್ಲ. ಹಾಗಾಗಿಯೇ ತಂದೆಯಂತೆ ಬೆಳೆಯಲು ಕಾರಣವಾಯಿತು ಎಂದು ಸಾಹಿತಿ ಭಾರದ್ವಾಜ ಕೆ. ಆನಂದತೀರ್ಥ ಅಭಿಪ್ರಾಯಪಟ್ಟರು. ಕುಶಾಲನಗರ ಸಮೀಪದದ ಕೂಡ್ಲೂರು ಗ್ರಾಮದ ಟಿ.ಆರ್. ಶರವಣಕುಮಾರ್ ಅವರ ನಿವಾಸದಲ್ಲಿ ಕುಶಾಲನಗರದ ಕನ್ನಡ ಸಾಹಿತ್ಯ ಮತ್ತು ಸಾಂಸ್ಕ್ರತಿಕ ವೇದಿಕೆ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಪೂರ್ಣಚಂದ್ರ ತೇಜಸ್ವಿ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ತೇಜಸ್ವಿ ಅವರು ಯಾವತ್ತೂ ಒಂದು ವಿಷಯಕ್ಕೆ ಸೀಮಿತವಾಗಿರಲಿಲ್ಲ. ಅವರು ತುಂಬಾ ಸಹಜವಾಗಿ ಬದುಕಿದವರು. ತೇಜಸ್ವಿ ಅವರದ್ದು ಸರಳವಾದ ಬೆಳವಣಿಗೆ. ವ್ಯಂಗ್ಯ, ತಮಾಷೆ, ನಿರಾಕರಣೆ ಗುಣ ಅವರಲ್ಲಿತ್ತು ಎಂದರು.
ಉಪನ್ಯಾಸಕ ಮೆ.ನಾ. ವೆಂಕಟ್‌ನಾಯಕ್ ಮಾತನಾಡಿ, ವೈದಿಕ ಧರ್ಮಕ್ಕೆ ಕುವೆಂಪು ವಿರುದ್ಧವಾಗಿದ್ದರು. ಇವರ ಸಾಹಿತ್ಯ ಸರ್ಕಾರಗಳನ್ನೇ ನಡುಗಿಸುವಂತೆ ಇರುತ್ತಿತ್ತು. ಇಂಥ ಶಸಕ್ತ ಬರಹಗಾರನ ಮಗನಾಗಿ ಜನಿಸಿದ ಪೂರ್ಣಚಂದ್ರ ತೇಜಸ್ವಿ ಎಂದಿಗೂ ತಮ್ಮ ಬರಹದಲ್ಲಿ ತಂದೆಯನ್ನು ಅನುಸರಿಸದೆ ತಮ್ಮದೇ ಆದ ಶೈಲಿ ರೂಢಿಸಿಕೊಂಡು ಜನ ಮೆಚ್ಚುಗೆ ಗಳಿಸಿದರು. ಗಟ್ಟಿಯಾದ ಬರಹದ ಶೈಲಿ ರೂಪಿಸಿಕೊಂಡವರು ತೇಜಸ್ವಿ ಎಂದು ಹೇಳಿದರು.
ಕೈಗಾರಿಕೋದ್ಯಮಿಗಳು ಮತ್ತು ವೃತ್ತಿರತರ ವಿವಿಧೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್. ಶರವಣಕುಮಾರ್ ಸರಳವಾದ ಭಾಷೆಯಲ್ಲಿ ವಿಜ್ಞಾನ ಅರ್ಥೈಸಿದವರು ಪೂರ್ಣಚಂದ್ರ ತೇಜಸ್ವಿ. ಓದುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಓದುವುದರಿಂದಲೇ ಜ್ಞಾನ ಬೆಳೆಯುತ್ತದೆ ಎಂದರು.
ಉಪನ್ಯಾಸಕಿ ಶಾಂತಿ ತೇಜಸ್ವಿ ಅವರ ಬದುಕು ಬರಹಗಳ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಗ್ಮೀ ವಿ.ಪಿ. ಶಶಿಧರ್ ಮಾತನಾಡಿ ನಮ್ಮ ಚಿಂತನೆಗೆ ಹೊರತಾದ ವಿಚಾರಗಳನ್ನು ತಿಳಿದುಕೊಳ್ಳುವ ಮೂಲಕ ಚಿಂತನಾಶೀಲತೆ ಬೆಳೆಸಿಕೊಳ್ಳಬಹುದು. ಕುವೆಂಪು ಅವರು ಪ್ರಬಲ ಜಾತ್ಯತೀತ ವ್ಯಕ್ತಿ ಆಗಿದ್ದರು. ಅವರ ವಿಚಾರಗಳು ಇಂದು ವ್ಯಕ್ತಪಡಿಸಿದ್ದರೆ ಹಿಂದು ವಿರೋಧಿ ಅನ್ನಿಸಿಕೊಳ್ಳುತ್ತಿದ್ದರು. ಮಡಿವಂತಿಕೆಯ ಒಕ್ಕಲಿಗರನ್ನು ವಿರೋಧಿಸಿದ್ದರು. ಇಂಥ ಕುವೆಂಪು ಅವರದ್ದು ಅತ್ಯುತ್ತಮ ಕೃತಿ ಪೂರ್ಣಚಂದ್ರ ತೇಜಸ್ವಿ ಎಂದು ಬೇಂದ್ರೆ ಹೇಳಿದ್ದು ಹೆಚ್ಚು ಅರ್ಥಪೂರ್ಣವಾಗಿದೆ. ಆದರೆ ಕುವೆಂಪು ಅವರ ರೀತಿಯಲ್ಲಿ ಸಮಾಜ ಸುಧಾರಣೆಯ ಯಾವುದೇ ಬರಹ ತೇಜಸ್ವಿ ಅವರದ್ದು ಇರಲಿಲ್ಲ. ಯಾವುದೇ ವಾದಕ್ಕೂ ಕಟ್ಟುಬೀಳದ ಆನೆ ನಡೆದದ್ದೇ ಹಾದಿ ಎನ್ನುವ ರೀತಿ ಬದುಕಿದವರು ತೇಜಸ್ವಿ. ಅವರ ಕೃತಿಗಳಲ್ಲೂ ಇದನ್ನು ಕಾಣಬಹುದಾಗಿದೆ. ಸುಲಲಿತ, ಸರಳ ಬರಹ ಶೈಲಿ ತೇಜಸ್ವಿ ಅವರದ್ದಾಗಿತ್ತು. ಪರಿಸರ ಮತ್ತು ಸಾಮಾಜಿಕ ಕಾಳಜಿ ತೇಜಸ್ವಿ ಬರಹಗಳಲ್ಲಿತ್ತು. ಜಾತಿ, ಮತ, ಪ್ರಾಂತ್ಯ ಹೊರತಾದ ಮನಸ್ಥಿತಿ ಅವರದ್ದಾಗಿತ್ತು ಎಂದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಕೊಡಗು ಜಿಲ್ಲಾಧ್ಯಕ್ಷ ಕೆ.ಎಸ್. ಮೂರ್ತಿ, ಉಪನ್ಯಾಸಕ ನಂಜುಂಡಸ್ವಾಮಿ ಇದ್ದರು.