

ಮುಂಡಗೋಡ: ನಮ್ಮ ಕಬ್ಜಾದಲ್ಲಿರುವಷ್ಟು ಜಾಗದ ಹಕ್ಕುಪತ್ರ ನೀಡಬೇಕು ಎಂದು ತಾಲೂಕಿನ ಅಗಡಿ ಗ್ರಾಮದ ಲಂಬಾಣಿ ಸಮುದಾಯದ ಮಹಿಳೆಯರು ತಹಸೀಲ್ದಾರ್ ಶಂಕರ ಗೌಡಿ ಅವರನ್ನು ತರಾಟೆಗೆ ತೆಗೆದುಕೊಂಡು ಜೀಪ್ಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ಸಂಜೆ ನಡೆದಿದೆ.
ತಾಲೂಕಿನ ಹುನಗುಂದ ಗ್ರಾಮದ ಅಗಡಿ ಗ್ರಾಮದಲ್ಲಿ ಲಂಬಾಣಿ ಸಮುದಾಯದ 60ಕ್ಕೂ ಹೆಚ್ಚು ಜನರು ಸರ್ಕಾರಿ ಪಡ ಜಾಗೆಯಲ್ಲಿ ಕಳೆದ ನಾಲ್ಕೈದು ದಶಕಗಳಿಂದ ಮನೆ ನಿರ್ವಿುಸಿಕೊಂಡು ವಾಸವಾಗಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ಮನೆಯ ದಾಖಲಾತಿಗಳಿದ್ದು, ಪ್ರತಿ ವರ್ಷ ಮನೆಯ ಕರ, ನೀರಿನ ಕರವನ್ನು ತುಂಬುತ್ತಾ ಬಂದಿದ್ದಾರೆ. ಹಳ್ಳಿಯಾಗಿದ್ದರಿಂದ ಮನೆಯ ಮುಂಭಾಗದಲ್ಲಿ ಆವರಣ ಹಾಗೂ ಹಿಂಭಾಗದಲ್ಲಿ ಹಿತ್ತಲು ಜಾಗೆಯಿದೆ. ದನಕರಗಳ ಕಟ್ಟಲು ಕೊಟ್ಟಿಗೆ ನಿರ್ವಿುಸಲಾಗಿದೆ ಹಾಗೂ ಅವುಗಳಿಗೆ ಹುಲ್ಲಿನ ಬಣವೆ, ಹಾಗೂ ಸೆಗಣಿ ಹಾಕಲು ತಿಪ್ಪೆಗಳನ್ನು ಮನೆಯ ಹಿಂದಿನ ಜಾಗದಲ್ಲಿ ಮಾಡಿಕೊಂಡು ಜಾಗವನ್ನು ಕಬ್ಜಾದಲ್ಲಿ ಇಟ್ಟುಕೊಳ್ಳಲಾಗಿದೆ.
ಹಕ್ಕುಪತ್ರ ವಿತರಣೆ:
ಸರ್ಕಾರಿ ಪಡ ಜಾಗದಲ್ಲಿ ಮನೆ ನಿರ್ವಿುಸಿಕೊಂಡವರಿಗೆ ಜಾಗ ಮಂಜೂರಿ ಮಾಡಲು ಸರ್ಕಾರದ ಆದೇಶದಂತೆ ತಹಸೀಲ್ದಾರ್ ಶಂಕರ ಗೌಡಿ, ಮನೆ ನಿರ್ವಿುಸಿಕೊಂಡವರ ಮನೆಯ ಅಳತೆಯನ್ನು ಮಾಡಿಸಿ ಮನೆ ಇರುವಷ್ಟು ಜಾಗವನ್ನು ಮಾತ್ರ ಮಂಜೂರಿ ಮಾಡಿ 33 ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 27 ಜನರಿಗೆ ಶೀಘ್ರ ಹಕ್ಕುಪತ್ರ ವಿತರಿಸಲು ಸಿದ್ಧತೆ ನಡೆಸಿದ್ದಾರೆ. ಆದರೆ, ಮನೆ ನಿರ್ವಿುಸಿಕೊಂಡಷ್ಟು ಜಾಗವನ್ನು ಮಾತ್ರ ಮಂಜೂರಿ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಜನರಿಂದ ಮುತ್ತಿಗೆ:
ನಮ್ಮ ಮನೆಯ ಕಟ್ಟಡ ಇರುವಷ್ಟು ಜಾಗವನ್ನು ಮಾತ್ರ ಮಂಜೂರಿ ಮಾಡಿದ್ದೀರಿ. ಮನೆಯ ಮುಂದೆ ಇರುವ ಆವರಣ ಹಾಗೂ ಹಿತ್ತಲು ಜಾಗವನ್ನೂ ಮಂಜೂರಿ ಮಾಡಬೇಕು ಎಂದು ಲಂಬಾಣಿ ಸಮುದಾಯದವರು ತಹಸೀಲ್ದಾರ್ ಶಂಕರ ಗೌಡಿ ಅವರನ್ನು ತರಾಟೆಗೆ ತೆಗೆದುಕೊಂಡು ಜೀಪ್ಗೆ ಮುತ್ತಿಗೆ ಹಾಕಿದರು. ಜನರ ಮಾತಿಗೆ ಉತ್ತರಿಸಲಾಗದೆ ತಹಸೀಲ್ದಾರ್ ಕೆಲ ಕ್ಷಣ ತಬ್ಬಿಬ್ಬಾದರೂ ನಂತರ ಮತ್ತೊಂದು ಬಾರಿ ಬಂದಾಗ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜನರನ್ನು ಸಮಾಧಾನ ಪಡಿಸಿ ಅಲ್ಲಿಂದ ಹೊರಬರಲು ಹರಸಾಹಸ ಪಡಬೇಕಾಯಿತು.
ಸರ್ಕಾರದ ನಿಯಮದಂತೆ ಮನೆ ಇರುವಷ್ಟು ಜಾಗವನ್ನು ಮಾತ್ರ ಅಳತೆ ಮಾಡಿ ಮಂಜೂರಿ ಮಾಡಲು ಸರ್ಕಾರ ಆದೇಶ ಮಾಡಿದೆ. ಅದರಂತೆ ನಾವು ಹಕ್ಕುಪತ್ರ ನೀಡಿದ್ದೇವೆ.| ಶಂಕರ ಗೌಡಿ ತಹಸೀಲ್ದಾರ್ ಅಗಡಿ ಗ್ರಾಮದಲ್ಲಿ ಸರ್ಕಾರಿ ಪಡ ಜಾಗದಲ್ಲಿ ಮನೆ ನಿರ್ವಿುಸಿಕೊಂಡಷ್ಟು ಜಾಗವನ್ನು ಮಾತ್ರ ಮಂಜೂರಿ ಮಾಡಿ ತಹಸೀಲ್ದಾರ್ ಹಕ್ಕುಪತ್ರ ನೀಡಿದ್ದಾರೆ. ಆದರೆ, ಹಳ್ಳಿಯಾಗಿದ್ದರಿಂದ ದನಕರುಗಳು, ಮನೆಯ ಹಿತ್ತಲು ಆವರಣ ಇದ್ದೆ ಇರುತ್ತದೆ. ಸರ್ಕಾರದಲ್ಲಿ ಐದು ಗುಂಟೆಯವರೆಗೂ ಜಾಗ ಮಂಜೂರಿ ಮಾಡಿ ಕೊಡಲು ಅವಕಾಶವಿದೆ. ಬಡ ಜನರಿಗೆ ಅನ್ಯಾಯವಾಗದಂತೆ ಕ್ರಮವಹಿಸುತ್ತೆವೆ.| ಶಿವರಾಮ ಹೆಬ್ಬಾರ, ಶಾಸಕ