ವಾರದೊಳಗೆ ವಕ್ಫ್ ಹೆಸರು ಅಳಿಸದಿದ್ದಲ್ಲಿ ತಹಸೀಲ್ದಾರ್ ಕಚೇರಿಗೆ ಬೀಗ

RBK 12-2 PROTEST
ರಬಕವಿ-ಬನಹಟ್ಟಿ ತಾಲೂಕಿನ ಹೊಸೂರಲ್ಲಿ ವಕ್ಫೃ್ ವಿರುದ್ಧ ಶಿವಶಂಕರ ಶ್ರೀಗಳು ಹಾಗೂ ಪರಮಾನಂದ ಶ್ರೀಗಳ ನೇತೃತ್ವದಲ್ಲಿ ಸೋಮವಾರ ಪ್ರತಿಭಟನಾ ರ‌್ಯಾಲಿ ನಡೆಯಿತು.
Published on

ರಬಕವಿ/ಬನಹಟ್ಟಿ: ಅವಳಿ ನಗರದ ಹೊಸೂರಿನಲ್ಲಿ 1.39 ಎಕರೆ ಹಿಂದು ರುದ್ರಭೂಮಿಯನ್ನು ಮುಸ್ಲಿಂ ಸುನ್ನಿ ವಕ್ಫ್ ಬೋರ್ಡ್ ಹೆಸರಿಗೆ ಸೇರಿಸಿದ್ದನ್ನು ವಿರೋಧಿಸಿ ಹೊಸೂರಿನ ಹಿಂದು ಸಮಸ್ತ ಸಮಾಜ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಮಂಗಳವಾರ ಪ್ರತಿಭಟನಾ ರ‌್ಯಾಲಿ ನಡೆಸಿದರು. ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ತಹಸೀಲ್ದಾರ್ ಗಿರೀಶ ಸ್ವಾದಿ ಅವರಿಗೆ ಮನವಿ ಸಲ್ಲಿಸಿದ ಹಳೇ ಹುಬ್ಬಳ್ಳಿಯ ವೀರಭಿಕ್ಷಾವತಿ ಮಠದ ಶಿವಶಂಕರ ಶ್ರೀಗಳು ಮಾತನಾಡಿ, ಒಂದು ವಾರದೊಳಗಾಗಿ ವಕ್ಫ್ ಹೆಸರು ತೆಗೆದು ಹಿಂದು ರುದ್ರಭೂಮಿ ಎಂದು ಮರು ಹೆಸರು ಸೇರ್ಪಡೆಗೊಳ್ಳದಿದ್ದರೆ ಕಚೇರಿಗೆ ಕೀಲಿ ಜಡಿದು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಸನಾತನ ಧರ್ಮವನ್ನು ಸರ್ಕಾರ ಹಾಗೂ ಅಧಿಕಾರಿಗಳು ಅರ್ಥ ಮಾಡಿಕೊಳ್ಳಬೇಕು. ಅಯೋಧ್ಯೆ, ಕಾಶಿ, ಸೋಮನಾಥ ದೇವಾಲಯ ನಂತರ ಇದೀಗ ಸ್ಮಶಾನಗಳಿಗೂ ಕೈ ಹಾಕಿದ್ದು, ಮುಂದಿನ ದಿನಗಳಲ್ಲಿ ಮಠ ಹಾಗೂ ಖಾಸಗಿ ಮನೆಗಳ ಮೇಲೂ ವಕ್ಫ್ ಹೆಸರು ನಮೂದಾಗುವ ಆತಂಕವಿದೆ. ರುದ್ರಭೂಮಿ ಉಳಿವಿಗಾಗಿ ಹೋರಾಟ ನಡೆಯುತ್ತಿರುವುದು ಇದೇ ಪ್ರಥಮ. ಇದು ಹಿಂದು ಜನತೆಗೆ ಮಾಡಿದ ಅಪಮಾನವೆಂದು ಖಂಡಿಸಿದರು.

ದೇಶವು ಸಂವಿಧಾನದ ಆಧಾರದ ಮೇಲೆ ನಡೆಯುತ್ತೆ ಹೊರತು, ಇಂತಹ ಜನರಿಗೆ ಮಾರಕವಾದ ವಕ್ಫ್‌ನಿಂದಲ್ಲ. ಈ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಅಧಿಕಾರಿಗಳನ್ನು ತನಿಖೆ ನಡೆಸಿ ವಜಾಗೊಳಿಸಬೇಕೆಂದು ಆಗ್ರಹಿಸಿದರು.

ನ್ಯಾಯವಾದಿ ವೆಂಕಟೇಶ ನಿಂಗಸಾನಿ ಮಾತನಾಡಿ, ಹೊಸೂರಿನ ಸರ್ವೇ ನಂ.64 ರಲ್ಲಿನ ಹಿಂದು ರುದ್ರಭೂಮಿಯಲ್ಲಿ ಹಲವು ತಲೆಮಾರುಗಳಿಂದ 17 ಸಮಾಜದ ಅಂತ್ಯಕ್ರಿಯೆಗಳು ನಡೆಯುತ್ತಿವೆ. ದಿಢೀರನೆ ಈ ಜಾಗವನ್ನು ವಕ್ಫ್ ಹೆಸರಿಗೆ ಮಾಡಿದ್ದು ಸರಿಯಲ್ಲ. ಸ್ಥಾನಿಕ ಚೌಕಾಶಿ ಮಾಡದೆ ಹಾಗೂ ಸಾರ್ವಜನಿಕರಿಂದ ಮಾಹಿತಿ ಪಡೆಯದೆ ಮನಬಂದಂತೆ ಆಡಳಿತ ನಡೆಸಿರುವ ಅಧಿಕಾರಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಮರಳಿ ಉತಾರದಲ್ಲಿ ಹಿಂದು ರುದ್ರಭೂಮಿ ಎಂದು ನಮೂದಾಗಬೇಕೆಂದರು.

ಹೊಸೂರಿನ ಮಲ್ಲಿಕಾರ್ಜುನ ದೇವಸ್ಥಾನದಿಂದ 3 ಕಿ.ಮೀ.ವರೆಗೆ ಹಲಗೆ, ತಮಟೆ ಬಾರಿಸುತ್ತ ತಹಸೀಲ್ದಾರ್ ಕಚೇರಿವರೆಗೆ ಮಹಿಳೆಯರು ಸೇರಿ ಅಪಾರ ಜನರು ಬೃಹತ್ ಪ್ರತಿಭಟನೆ ನಡೆಸಿದರು.

ಪರಮಾನಂದ ಶ್ರೀಗಳು, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವೆಂಕನಗೌಡ ಪಾಟೀಲ, ಸ್ಥಾಯಿ ಸಮಿತಿ ಚೇರ್ಮನ್ ಅರುಣ ಬುದ್ನಿ, ಶಂಕರಪ್ಪ ಭುಜರಕ, ಸುಭಾಸ ಚೋಳಿ, ಮಂಜು ಲೆಂಡಿ, ಬಾಲಚಂದ್ರ ಪಾಟೀಲ, ಶ್ರೀಶೈಲ ಮೇಣಿ, ಸತ್ಯಪ್ಪ ಮಗದುಮ್ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net