ತಹಸೀಲ್ದಾರ್​ ಕನ್ನಡ ಪ್ರೇಮ

Tehsildar Kannada love
ಮುದ್ದೇಬಿಹಾಳ ಬಲರಾಮ ಕಟ್ಟಿಮನಿ ಅವರ ಕನ್ನಡ ಸಹಿ.
Published on

ಮುದ್ದೇಬಿಹಾಳ: ಇಲ್ಲಿನ ತಾಲೂಕು ಕಾರ್ಯನಿರ್ವಾಹಕ ದಂಡಾಧಿಕಾರಿ, ತಹಸೀಲ್ದಾರ್​ ಬಲರಾಮ ಕಟ್ಟಿಮನಿ ಅವರು ಕನ್ನಡದ ಕಡತಗಳಿಗೆ ಕನ್ನಡದಲ್ಲೇ ಸಹಿ ಮಾಡುವ ಮೂಲಕ ಕನ್ನಡದ ಪ್ರೇಮ ಅನಾವರಣಗೊಳಿಸಿ ಕನ್ನಡ ರಾಜ್ಯೋತ್ಸವ ಆಚರಣೆಯ ಹೊತ್ತಿನಲ್ಲಿ ಸಮಾಜಕ್ಕೆ ಮಾದರಿ ಸಂದೇಶ ನೀಡಿದ್ದಾರೆ.

ಬಿಎಸ್ಸಿ ಕೃಷಿ ಪದವೀಧರರಾಗಿ ಪದೋನ್ನತಿ ಹೊಂದಿ ಗ್ರೇಡ್​&1 ತಹಸೀಲ್ದಾರ್​ ಸೇವೆಯಲ್ಲಿರುವ ಅವರು ಮೊದಲೆಲ್ಲ ಕನ್ನಡ, ಇಂಗ್ಲಿಷ್​ ಕಡತಗಳಿಗೆ ಇಂಗ್ಲಿಷ್​ನಲ್ಲೇ ಸಹಿ ಮಾಡುತ್ತಿದ್ದರು. ಕನ್ನಡ ರಾಜ್ಯೋತ್ಸವದ ಮಾಸ ನವೆಂಬರ್​ ತಿಂಗಳು ಹತ್ತಿರ ಬರುತ್ತಿದ್ದ ಹಾಗೆ ಕಡತಗಳಿಗೆ ಕನ್ನಡದಲ್ಲೇ ಸಹಿ ಹಾಕುವ ಮೂಲಕ ಇತರರಿಗೂ ಕನ್ನಡದಲ್ಲೇ ಸಹಿ ಹಾಕಲು ಪ್ರೇರಣೆ ನೀಡತೊಡಗಿದ್ದಾರೆ.

ಬ್ಯಾಂಕಿಂಗ್​, ಆರ್ಥಿಕ ವಹಿವಾಟು ಇನ್ನಿತರ ಅಗತ್ಯ ಸೇವೆಗಳಿಗೆ ಇಂಗ್ಲಿಷ್​ ಸಹಿ ಬಳಕೆ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದರಿಂದ ಅದನ್ನು ಮುಂದುವರಿಸಿದ್ದಾರೆ. ಆದರೆ ತಹಸೀಲ್ದಾರ್​ ಕಚೇರಿಯಿಂದ ಹೊರಡಿಸಲಾಗುವ ಕನ್ನಡ ರಾಜ್ಯೋತ್ಸವ ಸೇರಿ ಕನ್ನಡದ ಹಲವಾರು ಕಡತಗಳಿಗೆ ಕನ್ನಡದಲ್ಲೇ ಸಹಿ ಮಾಡುವುದನ್ನು ಪ್ರಾರಂಭಿಸಿರುವ ಅವರು ನವೆಂಬರ್​ ನಂತರವೂ ಈ ಪದ್ಧತಿ ಮುಂದುವರಿಸಲು ತೀರ್ಮಾನಿಸಿರುವುದು ಮಾದರಿ ಎನ್ನಿಸಿಕೊಂಡಿದೆ.

ಸರ್ಕಾರ ಕನ್ನಡದಲ್ಲೇ ವ್ಯವಹಾರ ನಡೆಸಬೇಕು ಎಂದು ಹಿಂದಿನಿಂದಲೂ ತನ್ನ ಅಧಿಕಾರಿಗಳಿಗೆ, ನೌಕರರಿಗೆ ಹೇಳುತ್ತಲೇ, ಕಾಲಕಾಲಕ್ಕೆ ಈ ಕುರಿತಾದ ಆದೇಶಗಳನ್ನು ಹೊರಡಿಸುತ್ತಲೇ ಇದೆ. ಆದರೆ ಕೆಎಎಸ್​, ಐಎಎಸ್​ ಕೆಡರ್​ನವರಲ್ಲಿ ಅನೇಕರು ಇದನ್ನು ಪಾಲಿಸುವುದಿಲ್ಲ. ಒಮ್ಮೊಮ್ಮೆ ನವೆಂಬರ್​ ತಿಂಗಳಲ್ಲಿ ಕಾಟಾಚಾರಕ್ಕೆ ಅನ್ನುವಂತೆ, ಯಾರದೋ ಒತ್ತಡಕ್ಕೆ ಒಳಗಾಗಿ ಕನ್ನಡದಲ್ಲಿ ಸಹಿ ಮಾಡುವುದನ್ನು ಪಾಲಿಸುತ್ತಾರೆ. ಇಂಥವರ ಮಧ್ಯೆ ಕೆಎಎಸ್​ ಅಧಿಕಾರಿಯಾಗಿರುವ ಕಟ್ಟಿಮನಿ ಅವರು ಅಕ್ಟೋಬರ್​ ತಿಂಗಳಿಂದಲೇ ಕನ್ನಡದಲ್ಲಿ ಸಹಿ ಮಾಡುವುದನ್ನು ಜಾರಿಗೊಳಿಸುವ ಮೂಲಕ ನವೆಂಬರ್​ ಮಾತ್ರವಲ್ಲದೆ ವರ್ಷ ಪೂರ್ತಿ ಮುಂದುವರಿಸುವ ಅಪೇೆ ಹೊಂದಿರುವುದು ವಿಶೇಷವಾಗಿದೆ.

ಅಗತ್ಯ ಸೇವೆಗಳಿಗೆ ಹಿಂದೆ ಇಂಗ್ಲಿಷ್​ ಸಹಿಯ ಮಾದರಿ ನೀಡಿದ್ದರಿಂದ ಅಂಥವುಗಳಿಗೆ ಮಾತ್ರ ಆ ಸಹಿ ಅನಿವಾರ್ಯ. ಇನ್ನುಳಿದವುಗಳಿಗೆಲ್ಲ ಕನ್ನಡದಲ್ಲೇ ಸಹಿ ಮಾಡುವುದನ್ನು ಪಾಲಿಸುತ್ತಿದ್ದೇನೆ. ಇದನ್ನು ಸರ್ಕಾರಿ ನೌಕರರೆಲ್ಲರೂ ಪಾಲಿಸಿ ಕನ್ನಡ ನಾಡಿಗೆ, ಕನ್ನಡ ನುಡಿಗೆ ಗೌರವ ಸಲ್ಲಿಸಬೇಕು ಅನ್ನೋದು ನನ್ನ ಅಪೇೆಯಾಗಿದೆ. ಈ ಮೂಲಕ ಕನ್ನಡ ಉಳಿಸಿ, ಬೆಳೆಸುವಲ್ಲಿ ಕೊಡುಗೆ ನೀಡಲು ಸರ್ಕಾರಿ ನೌಕರರೇ ಮೊದಲಿಗರಾಗಬೇಕೆನ್ನುವುದು ನನ್ನ ಬಯಕೆ.               > ಬಲರಾಮ ಕಟ್ಟಿಮನಿ, ತಹಸೀಲ್ದಾರ್​, ಮುದ್ದೇಬಿಹಾಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net