

ಗಂಗಾವತಿ: ತುಂಗಭದ್ರಾ ಎಡದಂಡೆ ಕಾಲುವೆ ಭಾಗದ ನೀರಿನ ಪ್ರಮಾಣ ಪರಿಶೀಲನೆಗಾಗಿ ಕಂದಾಯ ಮತ್ತು ನೀರಾವರಿ ನಿಗಮದ ಅಧಿಕಾರಿಗಳ ತಂಡ ಕಾಲುವೆ ವ್ಯಾಪ್ತಿಯಲ್ಲಿ ಸಂಚರಿಸಿದ್ದು, ಗೇಜ್ ಪರೀಕ್ಷಿಸಲಾಯಿತು.
ಎಡದಂಡೆ ಕಾಲುವೆಗೆ ಜಲಾಶಯದಿಂದ ನೀರು ಹರಿಸಲಾಗಿದ್ದು, ರಾಯಚೂರು ಭಾಗದ ಟೇಲ್ಯಾಂಡ್‌ವರೆಗೂ ನೀರು ತಲುಪಬೇಕಿದೆ. ಕಾಲುವೆಯ ಕೆಲ ಭಾಗದಲ್ಲಿ ನೀರು ಕಳವು ಪ್ರಕರಣ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಗಸ್ತಿಗಾಗಿ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿದ್ದು, ತಹಸೀಲ್ದಾರ್ ಮಂಜುನಾಥ ಭೋಗಾವತಿ ನೇತೃತ್ವದ ತಂಡ ಕಾಲುವೆಯುದ್ದಕ್ಕೂ ನಿಗಾವಹಿಸಿದೆ.
ತಾಲೂಕಿನ ದಾಸನಾಳ ಬಳಿ ಗೇಜ್ ಪರೀಕ್ಷಿಸಿದ ಅಧಿಕಾರಿಗಳ ತಂಡ ನೀರಿನ ಪ್ರಮಾಣ ಖಚಿತಪಡಿಸಿಕೊಂಡಿತು. ಜಲಾಶಯದಿಂದ ಹರಿಸುತ್ತಿರುವ ನೀರಿನ ಪ್ರಮಾಣ, ಮುಖ್ಯಕಾಲುವೆಯಲ್ಲಿ ಹರಿಯುವ ಪ್ರಮಾಣ ತಾಳೆ ಹಾಕಿದ ಅಧಿಕಾರಿಗಳು ನೀರು ಪೋಲಾಗದಿರುವ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಈ ಬಗ್ಗೆ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮಾತನಾಡಿ, ರಾಯಚೂರು ಭಾಗದ ರೈತರಿಗೆ ನೀರು ದೊರೆಯುವ ನಿಟ್ಟಿನಲ್ಲಿ ನಿಗಾ ವಹಿಸಲಾಗುತ್ತಿದ್ದು, ಕಾಲುವೆ ಮೇಲ್ಭಾಗದಲ್ಲಿ ನೀರು ಹರಿಯದಂತೆ ಕ್ರಮ ಕೈಗೊಳ್ಳಲಾಗಿದೆ. ನೀರು ಕಳವು ಪ್ರಕರಣ ಪತ್ತೆಗಾಗಿ ಕಂದಾಯ, ನೀರಾವರಿ ಮತ್ತು ಪೊಲೀಸರನ್ನೊಳಗೊಂಡ ಗಸ್ತು ತಂಡ ರಚಿಸಲಾಗಿದ್ದು, ರಾತ್ರಿ ವೇಳೆ ಸಂಚರಿಸಿ ಕಳವು ಪ್ರಕರಣ ಪತ್ತೆ ಹಚ್ಚಲಿದೆ. ಕಳವು ಪ್ರಕರಣ ಕಂಡುಬಂದಲ್ಲಿ ದೂರು ದಾಖಲಿಸಲಾಗುವುದು ಎಂದರು.
ನೀರಾವರಿ ನಿಗಮದ ನಂ2 ವಿಭಾಗದ ಇಇ ಎಸ್.ಎಂ.ಗೋಡೆಕರ್, ಕಂದಾಯ ನಿರೀಕ್ಷಕ ಮಹೇಶ ದಲಾಲ್ ಸೇರಿ ಜೆಇ ಮತ್ತು ಪೊಲೀಸ್ ಪೇದೆಗಳಿದ್ದರು.