ನೋಟಿಸ್ ನೀಡಲು ತಹಸೀಲ್ದಾರ್‌ಗೆ ಅಧಿಕಾರ ಇಲ್ಲ

7ark 3 A.T. RAMASWAMI
ಎ.ಟಿ. ರಾಮಸ್ವಾಮಿ
Published on

ಅರಕಲಗೂಡು: ತಾಲೂಕಿನ ಅರಸೀಕಟ್ಟೆ ಅಮ್ಮ ದೇವಸ್ಥಾನ ಹುಂಡಿ ಹಣ ಎಣಿಕೆ ಮಾಡದಂತೆ ಹಾಗೂ ಬಲಿಪೀಠದಲ್ಲಿ ಹಣ ಎತ್ತಬಾರದು ಎಂದು ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿಗೆ ನೋಟಿಸ್ ನೀಡಲು ತಹಸೀಲ್ದಾರ್‌ಗೆ ಅಧಿಕಾರ ಇಲ್ಲ ಎಂದು ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಹೇಳಿದರು.


ಹಿಂದು ಧಾರ್ಮಿಕ ದತ್ತಿ ಕಾಯ್ದೆ ಪ್ರಕಾರ ಸಮಿತಿಗೆ ನೋಟಿಸ್ ನೀಡುವ ಅಧಿಕಾರ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಇರುವುದೇ ಹೊರತು ತಹಸೀಲ್ದಾರ್ ಅವರಿಗೆ ಅಲ್ಲ. ಕಾಯ್ದೆ ಬಗ್ಗೆ ತಿಳಿಯದೆ ಯಾರದೋ ಒತ್ತಡಕ್ಕೆ ಒಳಗಾಗಿ ನೋಟಿಸ್ ನೀಡಿರುವುದು ಸಮಂಜಸವಲ್ಲ, ಕಾನೂನಿನ ಆಡಳಿತವನ್ನು ಎತ್ತಿ ಹಿಡಿಯಬೇಕಾದವರೇ ಕಾನೂನಿನ ಅರಿವಿಲ್ಲದೆ ನೋಟಿಸ್ ನೀಡುವ ಪ್ರವೃತ್ತಿ ನೋಡಿದರೆ ತಾಲೂಕು ಆಡಳಿತ ಬದುಕಿದೆಯಾ ಎನ್ನುವ ಪ್ರಶ್ನೆ ಮೂಡುತ್ತದೆ. ತಹಸೀಲ್ದಾರ್ ನೀಡಿರುವ ನೋಟಿಸ್‌ಗೆ ಮಾನ್ಯತೆಯೇ ಇಲ್ಲ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.


ದೇವಸ್ಥಾನ ಆಡಳಿತ ನಿರ್ವಹಣೆ ಕುರಿತು ತಹಸೀಲ್ದಾರ್ ಅವರು ಜಿಲ್ಲಾಧಿಕಾರಿಗೆ ಪತ್ರ ಬರೆದು, ಡಿಸಿ ಅವರು ಸರ್ಕಾರಕ್ಕೆ ಪತ್ರ ರವಾನಿಸಿದ್ದಾರೆ. ಸರ್ಕಾರದ ಉತ್ತರವನ್ನು ಕಾಯದೆ ಮತ್ತೆ ನೋಟಿಸ್ ನೀಡಿರುವುದನ್ನು ನೋಡಿದರೆ, ಇವರು ಸರ್ಕಾರಕ್ಕಿಂತ ಮೇಲಾ? ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸದನದಲ್ಲಿ, ಸಮಿತಿ ನೋಂದಣಿಯಾಗಿದ್ದು, ನಿಯಮಾವಳಿ ಪ್ರಕಾರವೇ ನಡೆಯುತ್ತಿದೆ ಎಂದು ಉತ್ತರಿಸಿದ್ದಾರೆ. ಇಷ್ಟಾದರೂ ದುರುದ್ದೇಶದಿಂದ ನೋಟಿಸ್ ನೀಡಿರುವುದು ಸರಿಯಲ್ಲ ಎಂದು ಖಾರವಾಗಿ ಉತ್ತರಿಸಿದರು.


ಕಾನೂನು ಪ್ರಕಾರ ರಚಿಸಿರುವ ಶ್ರೀ ಅರಸೀಕಟ್ಟೆ ಅಮ್ಮ ದೇವಸ್ಥಾನ ಸಮಿತಿ ಪಾರದರ್ಶಕವಾಗಿ ಆಡಳಿತ ನಿರ್ವಹಿಸುತ್ತಿದೆ. ಕಾಯ್ದೆಗೆ ಅನುಗುಣವಾಗದ ತೀರ್ಪನ್ನು ಒಪ್ಪಿಕೊಳ್ಳಬೇಕಾದ ಅವಶ್ಯಕತೆ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದೇ ರೀತಿ ಕಾಯ್ದೆಗೆ ಅನುಗುಣವಾಗಿಲ್ಲ. ಅವರ ನೋಟಿಸನ್ನು ಮಾನ್ಯ ಮಾಡಲು ಸಾಧ್ಯವಿಲ್ಲ. ಆದರೂ ಕಾನೂನಿಗಿಂತ ಯಾರು ದೊಡ್ಡವರಾಗಬಾರದು. ಅವರಿಗೆ ಸಮರ್ಪಕ ಉತ್ತರ ನೀಡುತ್ತೇವೆ. ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ನ್ಯಾಯಾಲಯ ಇರುತ್ತದೆ. ಅದಕ್ಕಿಂತ ದೊಡ್ಡವರಿಲ್ಲ. ಅದನ್ನು ಕೇಳಿಕೊಂಡರೆ ನಾನು ನಡೆಯುತ್ತಿರುವುದು ಸರಿನಾ ಎಂದು ಅರಿವಾಗುತ್ತದೆ. ಒಳ್ಳೆ ಕೆಲಸ, ಅಭಿವೃದ್ಧಿಗೆ ಪ್ರೋತ್ಸಾಹ ನೀಡಿ. ತಪ್ಪಿದ್ದರೆ, ದುರುಪಯೋಗವಾಗಿದ್ದರೆ ಅಧಿಕಾರಿಗಳು ಮಾತ್ರವಲ್ಲ. ಸಾಮಾನ್ಯ ಪ್ರಜೆಗಳು ಕೇಳುವ ಅವಕಾಶವಿದೆ ಎಂದು ಹೇಳಿದರು.


ಸಮಿತಿ ರಚನೆಗೂ ಮುನ್ನ ದೇವಸ್ಥಾನ ಹುಂಡಿಯಲ್ಲಿ ಕೇವಲ 2-3 ತಿಂಗಳಿಗೆ 30ರಿಂದ 40 ಸಾವಿರ ರೂ.ಎಣಿಕೆ ಮಾಡುತ್ತಿದ್ದರು. ಈಗ ವಾರಕ್ಕೆ 1 ಲಕ್ಷ ರೂ.ಹುಂಡಿಯಲ್ಲೇ ಬರುತ್ತಿದೆ. ಅದರಲ್ಲಿ 50 ಸಾವಿರ ರೂ.ಗಳು ಹರಿದ ನೋಟುಗಳೇ ಬಂದಿದ್ದವು. ಅವುಗಳನ್ನು ಬ್ಯಾಂಕಿಗೆ ಜಮಾ ಮಾಡಿಸಿದ್ದೇವೆ. ಅಷ್ಟೇಯಲ್ಲ ಭಕ್ತರು ಹಾಕುವ ಬೆಳ್ಳಿ, ತಾಮ್ರ, ಹಿತ್ತಾಳೆಗಳನ್ನು 10 ಲಕ್ಷ ರೂ.ಗೆ ಮಾರಾಟ ಮಾಡಿ ಬ್ಯಾಂಕ್‌ಗೆ ಜಮಾ ಮಾಡಿದ್ದೇವೆ. ಈ ಹಿಂದೆ ಎಷ್ಟು ಹಣ, ಒಡವೆ ಜಮಾ ಮಾಡಿದ್ದರು ಎನ್ನುವ ಬಗ್ಗೆ ತನಿಖೆಯಾಗಲಿ, ಹಿಂದಿನ 10 ವರ್ಷದ್ದನ್ನು ತನಿಖೆ ಮಾಡಿಸಿ, ತಪ್ಪು ಯಾರೇ ಮಾಡಿದ್ದರೂ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದ ಅವರು, ಪ್ರಚಾರಕ್ಕಾಗಿ ಹೇಳುವುದು ಒಳ್ಳೆಯದಲ್ಲ, ಕಾಲಚಕ್ರ ತಿರುಗುತ್ತಿರುತ್ತದೆ ಕಾಯುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಸಮಿತಿ ನೋಂದಣಿ ಮಾಡಿಸಿ ಪ್ರತಿ ವಷರ್ದ ಆಡಿಟ್ ಮಾಡಿಸುತ್ತಿದ್ದೇವೆ. ಕೆಲವರಿಗೆ ಅಭಿವೃದ್ಧಿ, ಪ್ರಾಮಾಣಿಕತೆ ಕಂಡರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ಜಗಜ್ಜಾಹೀರಾಗಿದೆ. ಹಿಂದೆ ಅರಸೀಕಟ್ಟೆ ದೇವಾಲಯ ದುಸ್ಥಿತಿ ಹೇಗಿತ್ತು. ಈಗ ಅಭಿವೃದ್ಧಿ ಕಂಡಿರುವುದು ಹೇಗಿದೆ ಎಂಬುದನ್ನು ಜನರೇ ನೋಡುತ್ತಿದ್ದಾರೆ. ಭಕ್ತರಿಗೆ ಮೂಲಸೌಕರ್ಯಗಳನ್ನು ಒದಗಿಸಿ ಅರಸೀಕಟ್ಟೆ ದೇವಸ್ಥಾನದ ಆವರಣವನ್ನು ಧಾರ್ಮಿಕ, ಸಾಂಸ್ಕೃತಿಕವಾಗಿ ಪ್ರವಾಸೋದ್ಯಮ ಕೇಂದ್ರ ಮಾಡಲು ಸಮಿತಿ ಎಲ್ಲ ಭಕ್ತರ ಸಹಕಾರದಿಂದ ಹೆಚ್ಚು ಶ್ರಮ ವಹಿಸುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net