

ದೇವರಹಿಪ್ಪರಗಿ: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇಮಕಾತಿಗಾಗಿ ಸ್ಪರ್ಧಾತ್ಮಕ ಪರೀಕ್ಷೆ ಕಟ್ಟುನಿಟ್ಟಾಗಿ ಭಾನುವಾರ ಪಟ್ಟಣದ ಪರೀಕ್ಷಾ ಕೇಂದ್ರಗಳಲ್ಲಿ ಸುಗಮವಾಗಿ ನಡೆಯಿತು.
ಪಟ್ಟಣದ ಪರೀಕ್ಷಾ ಕೇಂದ್ರಗಳಾದ ಸಿದ್ಧೇಶ್ವರ ಸ್ವಾಮೀಜಿ, ವೆಂಕಟೇಶ್ವರ ಮತ್ತು ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಪಿ.ಯು ಕಾಲೇಜುಗಳಲ್ಲಿ ಪರೀಕ್ಷೆ ನಡೆಯಿತು. ಸಿದ್ಧೇಶ್ವರ ಸ್ವಾಮೀಜಿ ಪಿ.ಯು ಕಾಲೇಜಿನ 19 ಕೊಠಡಿಗಳಲ್ಲಿ 450, ಬಿಎಲ್‌ಡಿಇ ಸಂಸ್ಥೆಯ ಎ.ಬಿ.ಸಾಲಕ್ಕಿ ಕಾಲೇಜಿನ 17 ಕೊಠಡಿಗಳಲ್ಲಿ 408 ಹಾಗೂ ವೆಂಕಟೇಶ್ವರ ಕಾಲೇಜಿನ 17 ಕೊಠಡಿಗಳಲ್ಲಿ 408 ರಂತೆ ಒಟ್ಟು 3 ಪರೀಕ್ಷಾ ಕೇಂದ್ರಗಳಲ್ಲಿ 1266 ಪರೀಕ್ಷಾರ್ಥಿಗಳು ಪರೀಕ್ಷೆ ಬರೆದರು.
ಪರೀಕ್ಷಾ ಕೇಂದ್ರಗಳಲ್ಲಿ ವೈಯಕ್ತಿಕ ತಪಾಸಣೆಗೆ ಒಳಪಡಿಸಿದಾಗ ಮೊಬೈಲ್ ಸೇರಿ ಇನ್ನಿತರ ಇಲೆಕ್ಟ್ರಾನಿಕ್ಸ್ ವಸ್ತುಗಳು ಹಾಗೂ ಪುರುಷ ಅಭ್ಯರ್ಥಿಗಳು ಉದ್ದ ತೋಳಿನ ಅಂಗಿ, ಮಹಿಳೆಯರು ಮಾಂಗಲ್ಯದ ಹೊರತಾಗಿ ಯಾವುದೇ ಆಭರಣ ಹಾಗೂ ಹಿಜಾಬ್‌ದಂತ ಉಡುಗೆ ಧರಿಸಿರಬಾರದು ಎಂಬ ನಿರ್ದೇಶನದ ಹಿನ್ನೆಲೆಯಲ್ಲಿ ಕೆಲವರು ಪರದಾಡಿದ ಪ್ರಸಂಗ ಕಂಡು ಬಂದಿತು.
ತಹಸೀಲ್ದಾರ್ ಪ್ರಕಾಶ ಸಿಂದಗಿ ಸೇರಿ ನಿಯೋಜಿತ ಪೊಲೀಸ್ ಹಾಗೂ ಪರೀಕ್ಷಾ ಕೇಂದ್ರಗಳ ನಿಯೋಜಿತ ಸಿಬ್ಬಂದಿ ಮೇಲ್ವಿಚಾರಣೆಯಲ್ಲಿ ಪಟ್ಟಣದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಿಗದಿಯಂತೆ ನಡೆಯಿತು.