

ಹರಿಹರ: ಮಾ.7 ರಂದು ಮಂಡಿಸಲಿರುವ ಬಜೆಟ್ನಲ್ಲಿ ದಲಿತ ಸಮುದಾಯ ಹಾಗೂ ಇತರೆ ಸಾಮಾನ್ಯ ವಿಷಯಕ್ಕೆ ಸಂಬಂಧಿಸಿದಂತೆ ವಿವಿಧ ಬೇಡಿಕೆಗಳನ್ನು ಪರಿಗಣಿಸಲು ಆಗ್ರಹಿಸಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಕದಸಂಸ) ಕಾರ್ಯಕರ್ತರು ತಹಸೀಲ್ದಾರರ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಕದಸಂಸ ತಾಲೂಕು ಸಂಚಾಲಕ ಪಿ.ಜೆ. ಮಹಾಂತೇಶ್ ಮಾತನಾಡಿ, ಒಳ ಮೀಸಲಾತಿ ಜಾರಿ ಮಾಡದೆ ಬ್ಯಾಕ್ಲಾಗ್ ಹುದ್ದೆಗಳಿಗೆ ನೇಮಕಾತಿ ಮಾಡಬಾರದು, ಹಾಗೊಮ್ಮೆ ನೇಮಕಾತಿ ಮಾಡಿದರೆ ನಿಜವಾದ ದಲಿತರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಕದಸಂಸ ಸಂಸ್ಥಾಪಕರಾದ ಪ್ರೊ.ಬಿ.ಕಷ್ಣಪ್ಪನವರ ಜನ್ಮ ದಿನವಾದ ಜೂನ್ 9 ರಂದು ಸರ್ಕಾರದಿಂದ ಆಚರಣೆ ಮಾಡುವುದು ಮತ್ತು ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿಯನ್ನು ಘೊಷಿಸಬೇಕು ಎಂದು ಹೇಳಿದರು.
ಹರಿಹರ ನಗರಕ್ಕೆ ಸಂಚಾರ ಪೊಲೀಸ್ ಠಾಣೆ ಮಂಜೂರು ಮಾಡಬೇಕು. ತಾಲೂಕಿನ ಬೆಳ್ಳೂಡಿ-ರಾಮತೀರ್ಥ ನಡುವಿನ ಸೂಳೆಕೆರೆ ಹಳ್ಳಕ್ಕೆ ಸೇತುವೆ ನಿರ್ವಿುಸಬೇಕು. ಕಡ್ಲೆಗೊಂದಿ ಗ್ರಾಮದ ಸರ್ಕಾರಿ ಜಾಗದಲ್ಲಿ ನಿರ್ವಸತಿಕ ದಲಿತ ಮತ್ತು ಹಿಂದುಳಿದ ವರ್ಗ ಹಾಗೂ ಇತರೆ ಜಾತಿ, ಜನಾಂಗದವರಿಗೆ ವಸತಿ ಯೋಜನೆ ರೂಪಿಸುವುದು. ಗ್ರಾಮದಲ್ಲಿ ರುದ್ರಭೂಮಿಗೆ ಎಂದು ಕಾಯ್ದಿರಿಸಿರುವ 1 ಎಕರೆ ಜಾಗವನ್ನು ಸಂರಕ್ಷಿಸಬೇಕು ಎಂದು ತಿಳಿಸಿದರು.
ತಾಲೂಕಿನ ಭಾನುವಳ್ಳಿ ಗ್ರಾಮದ ಎ.ಕೆ. ಕಾಲನಿಯ ವಿವಾದವಿಲ್ಲದ ಪ್ರದೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಪುತ್ಥಳಿ ಹಾಗೂ ಸ್ವಾಗತ ಕಮಾನು ಸ್ಥಾಪಿಸಲು ಅನುಮತಿ ನೀಡಲು ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿ ಬೇಡಿಕೆಗೆ ತಕ್ಕಂತೆ ಹೆಚ್ಚಿನ ಸಂಖ್ಯೆಯಲ್ಲಿ ಮುರಾರ್ಜಿ ವಸತಿ ಶಾಲೆಯನ್ನು ಮಂಜೂರು ಮಾಡಬೇಕು. ರಾಜ್ಯಾದ್ಯಂತ ನಡೆಯುವ ಜಾತ್ರೆ, ಹಬ್ಬ, ಹರಿದಿನ, ಉತ್ಸವಗಳಲ್ಲಿ ಮೌಢ್ಯಾಚರಣೆಗಳನ್ನು ನಡೆಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಹರಿಹರಕ್ಕೆ ಪರ್ಯಾಯ ಕುಡಿಯುವ ನೀರಿನ ಅಗಸನಕಟ್ಟೆ ಯೋಜನೆಗೆ ಮಂಜೂರಾತಿ, ತಾಲೂಕಿನ ಸಮಗ್ರ ಪ್ರಗತಿಗೆ 1000 ಕೋಟಿ ರೂ. ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.
ತಹಸೀಲ್ದಾರ್ ಪರವಾಗಿ ಶಿರಸ್ತೇದಾರ್ ಸುನಿತಾ ಇವರು ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಎಸ್.ಕೆ. ಹರೀಶ್, ಜಿ. ನವೀನ್, ಟಿ.ಎಚ್. ಮಂಜುನಾಥ್, ಹನುಮಂತ, ಎಚ್. ಸ್ವಾಮಿ, ವಿ. ಕಾರ್ತಿಕ್, ಎನ್. ದಿವಾಕರ್, ಬಿ. ಹನುಮಂತ, ಆರ್. ಹಳದೇಶ್, ಪಿ.ಪ್ರಶಾಂತ್, ಕೆ. ಅಪ್ಪು, ಎಚ್. ಹನುಮಂತ ಇದ್ದರು.