

ಮುದ್ದೇಬಿಹಾಳ: ತಾಳಿಕೋಟೆ ಅಂಗನವಾಡಿ ಕಾರ್ಯಕರ್ತೆ ನೀಲಮ್ಮ ಬೋರಾವತ್ (ಪಾಟೀಲ) ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿ 25ಕ್ಕೂ ಹೆಚ್ಚು ಕಾರ್ಯಕರ್ತೆಯರು ಶುಕ್ರವಾರ ಸಂಜೆ ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಮನವಿ ಸಲ್ಲಿಸಿದರು.
ಕೆಲವು ಕಾರ್ಯಕರ್ತೆಯರಿಗೆ ತಲೆ ಕೆಡಿಸಿ, ಆಮಿಷ ತೋರಿಸಿ, ಗುಂಪು ಕಟ್ಟಿಕೊಂಡು ಮೇಲಧಿಕಾರಿಗಳ ಮೇಲೆ ಸುಳ್ಳು ಆರೋಪ ಮಾಡುವ, ದೂರು ನೀಡುವ, ಕಾರ್ಯಕರ್ತೆಯರನ್ನು ಎತ್ತಿ ಕಟ್ಟಿ ಸತ್ಯಾಗ್ರಹ ನಡೆಸುವ, ತನ್ನ ಮಾತು ಕೇಳದವರನ್ನು ವರ್ಗಾಯಿಸುವ, ನೌಕರಿಯಿಂದ ತೆಗೆಸುವ ಬೆದರಿಕೆ ಹಾಕುವ, ತನಗೆ ಅನುಕೂಲ ಆಗುವವರಿಗೆ ನಕಲಿ ರಹವಾಸಿ ಕೊಡಿಸುವ, ಆಗಿಬರದಿದ್ದರೆ ನಕಲಿ ದಾಖಲೆ ಸೃಷ್ಟಿಸಿ ವರ್ಗಾವಣೆ ಮಾಡಿಸುವ ಕೃತ್ಯಗಳನ್ನು ನಡೆಸುತ್ತಿರುವ ನೀಲಮ್ಮ ಬೋರಾವತ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.
ಮನವಿಯಲ್ಲಿ ನೀಲಮ್ಮ ವಿರುದ್ಧ ಹಲವು ಪ್ರಶ್ನೆಗಳನ್ನು ಕೇಳಿರುವ, ಹಲವು ಆರೋಪಗಳನ್ನು ಮಾಡಿರುವ ಕಾರ್ಯಕರ್ತೆಯರು, ಬೇರೆ ಇಲಾಖೆಗಳಲ್ಲಿ ನೌಕರರು ಏನಾದರೂ ತಪ್ಪು ಮಾಡಿದರೆ ಅವರನ್ನು ಮುನ್ಸೂಚನೆ ನೀಡದೆ ಕೆಲಸದಿಂದ ಅಮಾನತು ಅಥವಾ ವಜಾ ಮಾಡುತ್ತಾರೆ. ಆದರೆ ಇವರು ತಾನು ಕೆಲಸ ಮಾಡುವ ಇಲಾಖೆಯ ಮೇಲಧಿಕಾರಿ ವಿರುದ್ಧವೇ ಅತ್ಯಾಚಾರದಂತಹ ಗಂಭೀರ ಆರೋಪ ಮಾಡಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ. ಮುಗ್ಧ ಕಾರ್ಯಕರ್ತೆಯರನ್ನು ಎತ್ತಿ ಕಟ್ಟಿ ಇಲಾಖೆ ಮಾನ ಹರಾಜು ಹಾಕುತ್ತಿರುವ ಇವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ಹಲವಾರು ಸಂಶಯಗಳಿಗೆ ಕಾರಣವಾಗಿದೆ. ಕೂಡಲೇ ಅಧಿಕಾರಿಗಳು ಇವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಸಾವಿತ್ರಿ ನಾಗರಿತ್ತಿ, ರೇಣುಕಾ ಲಮಾಣಿ, ರೇಣುಕಾ ಹಡಪದ, ಮಹಾದೇವಿ ನಾಗೋಡ, ಗುರುಬಾಯಿ ಮಲಗೌಡ್ರ, ಜಯಶ್ರೀ ಹಿರೇಮಠ, ಕಲಾವತಿ ಪಾದಗಟ್ಟಿ, ಸುವರ್ಣಾ ಕಾಳೆ, ರೇಣುಕಾ ಕುಂಟೋಜಿ, ರೇಣುಕಾ ಬಿರಾದಾರ, ಾತಿಮಾ ಕಾಳಗಿ, ಅಮೃತಾ ಪಾಟೀಲ, ರುದ್ರವ್ವ ಕೋಟಿ, ಶಶಿಕಲಾ ಹಿರೇಮಠ, ಶಿವಲೀಲಾ ಬಿರಾದಾರ, ಲಕ್ಷ್ಮೀ ಹೆಬ್ಬಾಳ, ಶಾಂತಾ ಢವಳೇಶ್ವರ, ಶಕೀಲಾ ಮುಲ್ಲಾ, ಲತಾ ಕುಲಕರ್ಣಿ, ರೇಖಾ ಕುಲಕರ್ಣಿ ಇತರರಿದ್ದರು.