22ನೇ ವಾರ್ಡ್ ಚುನಾವಣೆ ಡಿ.27 ರಂದು

Untitled design
ಅರುಣ್ ದೇಸಾಯಿ
Published on

ಸಿಂಧನೂರು: ನಗರದ 22ನೇ ವಾರ್ಡ್‌ನ ನಗರಸಭೆ ಸದಸ್ಯ ನಿಧನದಿಂದ ತೆರವಾದ ಸ್ಥಾನಕ್ಕೆ ಡಿ.27 ರಂದು ಚುನಾವಣೆ ನಡೆಯಲಿದೆ ಎಂದು ತಹಸೀಲ್ದಾರ್ ಅರುಣ್ ದೇಸಾಯಿ ತಿಳಿಸಿದರು.

ನಾಮಪತ್ರ ಸಲ್ಲಿಕೆಗೆ ಡಿ. 15ಕ್ಕೆ ಕೊನೇ ದಿನ

ನಗರದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಮಾತನಾಡಿ, ನಗರಸಭೆ ಸದಸ್ಯ ಹೃದಯಘಾತದಿಂದ ನಿಧನರಾಗಿದ್ದರು. ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿ. 15ಕ್ಕೆ ಕೊನೇ ದಿನವಾಗಿದೆ. ನಗರಸಭೆ ಕಚೇರಿ ಆರ್‌ಒ ಅವರಿಗೆ ನಾಮಪತ್ರ ಸಲ್ಲಿಸಬಹುದು. ಡಿ. 16 ಪರಿಶೀಲನೆ, 18 ನಾಮಪತ್ರ ವಾಪಾಸ್ ಪಡೆಯಬಹುದಾಗಿದೆ. ಡಿ.27 ರಂದು ಚುನಾವಣೆ ನಡೆಯಲಿದೆ ಎಂದರು.

22ನೇ ವಾರ್ಡ್‌ನಲ್ಲಿ ನೀತಿ ಸಂಹಿತೆ ಜಾರಿ

22ನೇ ವಾರ್ಡ್‌ಗೆ ಮಾತ್ರ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ. ಸರ್ಕಾರಿ ಕಾರ್ಯಕ್ರಮ ಆಯೋಜನೆ, ಅಕ್ರಮ ಚಟುವಟಿಕೆ ನಡೆಯದಂತೆ ಹಾಗೂ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ನ್ಯಾಯ ಸಮ್ಮತ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು.

ಸಿಂಧನೂರಿಗೆ ಕನ್ನಡ ರಥ : ಕರ್ನಾಟಕ ಸಂಭ್ರಮ-50 ರ ಅಂಗವಾಗಿ ಕನ್ನಡ ರಥವು ಡಿ. 18 ರಂದು ನಗರಕ್ಕೆ ಆಗಮಿಸಲಿದ್ದು, ಅದ್ದೂರಿಯಾಗಿ ಸ್ವಾಗತ ಮಾಡಲಾಗುವುದು. ಪ್ರತಿ ಹಳ್ಳಿ-ನಗರದಲ್ಲಿ ಡಿ. 18 ರಿಂದ 20 ವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಡಿ. 18 ರಂದು ಪೋತ್ನಾಳ ಕ್ರಾಸ್ ಹತ್ತಿರ ಅದ್ದೂರಿ ಸ್ವಾಗತ ನೀಡಿ, ವಲ್ಕಂದಿನ್ನಿ, ರಾಗಲಪರ್ವಿ, ಗೋನ್ವಾರ ಮಾರ್ಗವಾಗಿ, ಆಯನೂರು, ಹೆಡಗಿನಾಳ, ಒಳಬಳ್ಳಾರಿ, ಬಾದರ್ಲಿ, ಅಲಬನೂರು, ಬೆಳಗುರ್ಕಿ, ಗೋಮರ್ಸಿ, ನಗರದ ಪಿಡಬ್ಲ್ಯುಡಿಕ್ಯಾಂಪ್‌ವರೆಗೆ ರಥದ ಮೆರವಣಿಗೆ ನಡೆಯಲಿದೆ. 19 ರಂದು ಸಿಎಂ ಸಿದ್ದರಾಮಯ್ಯ ರಥ ಯಾತ್ರೆಗೆ ತಹಸಿಲ್ ಕಚೇರಿ ಬಳಿ ಚಾಲನೆ ನೀಡಲಿದ್ದಾರೆ. ನಂತರ ಸಾವಿರಾರು ವಿದ್ಯಾರ್ಥಿಗಳನ್ನೊಳಗೊಂಡ ಮೆರವಣಿಗೆ ಸರ್ಕಾರಿ ಮಹಾವಿದ್ಯಾಲಯಕ್ಕೆ ಬಂದು ತಲುಪಲಿದೆ. ಅಂದು ಸಂಜೆ ವಿರೂಪಾಪುರ, ಗುಂಜಳ್ಳಿ ಮಾರ್ಗವಾಗಿ ತುರ್ವಿಹಾಳಗೆ ತೆರಳಲಿದ್ದು ಅಲ್ಲಿ ಮೆರವಣಿಗೆ ನಡೆಯಲಿದೆ. 20 ರಂದು ಹೊಸಳ್ಳಿ(ಇಜೆ), ಗೊರೇಬಾಳ, ಗೊರೇಬಾಳಕ್ಯಾಂಪ್, ಶ್ರೀಪುರಂಜಕ್ಷನ್, ನಂತರ ಜವಳಗೇರಾಕ್ಕೆ ತೆರಳಿ ಅಲ್ಲಿಂದ ಬೀಳ್ಕೊಡಲಾಗುವುದು ಎಂದು ತಿಳಿಸಿದರು. ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಇಒ ಚಂದ್ರಶೇಖರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net