

ಮುದ್ದೇಬಿಹಾಳ: ಪುರಸಭೆ ಸದಸ್ಯೆಯ ಮಗನೊಬ್ಬ ತನಗೆ ವಿನಾಕಾರಣದ ತೊಂದರೆ ಕೊಡುತ್ತಿದ್ದಾರೆ. ಮೇಲಧಿಕಾರಿಗಳಿಗೆ ಇಲ್ಲಸಲ್ಲದ ಮಾಹಿತಿ ನೀಡಿ ಕಿರುಕುಳ ಮತ್ತು ಮಾನಸಿಕ ಕಿರಿಕಿರಿ ಮಾಡುತ್ತಿದ್ದಾರೆ. ಈ ಬಗ್ಗೆ ಸಿಡಿಪಿಒ ಕಚೇರಿ ಗಮನಕ್ಕೆ ತಂದರೆ ಅವರು ನಿರ್ಲಕ್ಷೃ ಮಾಡುತ್ತಿದ್ದಾರೆ. ತನಗೆ ನ್ಯಾಯ ಕೊಡಿಸಬೇಕು ಎಂದು ಕೋರಿ ಪಟ್ಟಣದ ಪಿಲೇಕೆಮ್ಮನಗರ ಬಡಾವಣೆಯ ಅಂಗನವಾಡಿ ನಂಬರ್ 1 ಕೇಂದ್ರದ ಕಾರ್ಯಕರ್ತೆ ಶಾಂತಾ ಮಾಮನಿ ಅವರು ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿದ್ದಾರೆ.
30 ವರ್ಷದಿಂದ ಇದೇ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲಿವರೆಗೂ ಯಾವುದೇ ಸಮಸ್ಯೆ ಇರಲಿಲ್ಲ. ಪುರಸಭೆ ಸದಸ್ಯೆ ಶರೀಾ ಮೂಲಿಮನಿ ಅವರ ಪುತ್ರ ಅಜರುದ್ದೀನ್ ಅವರು, ನಾನು ಗರ್ಭಿಣಿಯರಿಗೆ ಸರಿಯಾಗಿ ರೇಷನ್ ಕೊಡುವುದಿಲ್ಲ, ನಾನು ಅಂಗನವಾಡಿಗೆ ಸರಿಯಾಗಿ ಬರುವುದಿಲ್ಲ ಎನ್ನುವುದೂ ಸೇರಿ ಹಲವು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಮೇಲಧಿಕಾರಿಗಳಿಗೆ, ಶಾಸಕರಿಗೆ ಯಾವ್ಯಾವುದೋ ೋಟೋ ಕಳಿಸಿ ತೊಂದರೆ ಕೊಡುತ್ತಿದ್ದಾರೆ. ಇದರಿಂದ ನನಗೆ ಸಾಕಾಗಿ ಹೋಗಿದೆ ಎಂದು ದೂರಿದ್ದಾರೆ.
ನನಗಾಗುತ್ತಿರುವ ತೊಂದರೆ ಕುರಿತು ಸಿಡಿಪಿಒ ಅವರಿಗೆ ತಿಳಿಸಲು ಸಿಡಿಪಿಒ ಕಚೇರಿಗೆ ಹೋದರೆ ಸ್ಪಂದಿಸುತ್ತಿಲ್ಲ. ನನ್ನ ಮನವಿಯ ಪತ್ರವನ್ನೂ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ನಾನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿಜಯಪುರದ ಉಪನಿರ್ದೇಶಕರಿಗೆ ಪತ್ರ ಬರೆದು ಏಕಾಂಗಿಯಾಗಿ ಧರಣಿ ಪ್ರಾರಂಭಿಸಿದ್ದೇನೆ. ನ್ಯಾಯ ಸಿಗುವ ತನಕ ಈ ಧರಣಿ ಮುಂದುವರಿಸುತ್ತೇನೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದು ಅಂಗನವಾಡಿ ಮೇಲ್ವಿಚಾರಕಿ ಶಾರದಾ ಗುಮಶೆಟ್ಟಿ ಅವರು ಸ್ಥಳಕ್ಕೆ ಬಂದು ಮಾಹಿತಿ ಪಡೆದು ತಹಸೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ತಿಳಿಸಿದ್ದಾರೆ. ತಹಸೀಲ್ದಾರ್ ಅವರು ಶಾಂತಾ ಅವರನ್ನು ತಮ್ಮ ಕಚೇರಿಗೆ ಕರೆಸಿಕೊಂಡು ಅವರ ಹೇಳಿಕೆ ಆಲಿಸಿದ್ದಾರೆ. ನಿಮಗಾಗುತ್ತಿರುವ ತೊಂದರೆ ಬಗ್ಗೆ ಸಿಡಿಪಿಒಗೆ ಯಾಕೆ ಮಾಹಿತಿ ಕೊಟ್ಟಿಲ್ಲ ಎಂದು ಕೇಳಿದಾಗ ಶಾಂತಾ ಅವರು ಕಚೇರಿಗೆ ಹೋದರೂ ಸಿಡಿಪಿಒ ಕಚೇರಿಯವರು ಸ್ಪಂದನೆ ನೀಡದಿರುವುದನ್ನು ತಿಳಿಸಿದ್ದಾರೆ.
ಇದರಿಂದ ಗರಂ ಆದ ತಹಸೀಲ್ದಾರ್ ಅವರು ನಿಮ್ಮದೇ ಇಲಾಖೆಯ ಕಾರ್ಯಕರ್ತೆಯರೊಬ್ಬರಿಗೆ ಅನ್ಯಾಯವಾದಾಗ ಮೊದಲು ನಿಮ್ಮ ಕಚೇರಿಯವರು ಸ್ಪಂದಿಸಬೇಕು. ಅವರ ಬೇಡಿಕೆ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು. ಬೇಜವಾಬ್ದಾರಿತನ ತೋರಿಸಬಾರದು. ಕೂಡಲೇ ಅವರಿಂದ ಪತ್ರ ಪಡೆದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ವರದಿ ಸಲ್ಲಿಸಬೇಕು. ಇಲ್ಲವಾದಲ್ಲಿ ನಾನೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಮೇಲ್ವಿಚಾರಕಿಗೆ ತಹಸೀಲ್ದಾರ್ ಅವರು ಎಚ್ಚರಿಕೆ ನೀಡಿದ್ದಾರೆ.