ಜ.23ರಿಂದ ತಂತ್ರಜ್ಞಾನ ಕೌಶಲ ಪ್ರದರ್ಶನ; ಬಿಐಇಸಿಯಲ್ಲಿ ಆಯೋಜನೆ

imtex
Published on

ಬೆಂಗಳೂರು: ಐಎಂಟಿಇಎಕ್ಸ್ (ಇಮ್ಟೆಕ್ಸ್ ) 2025 ಭಾರತೀಯ ತಂತ್ರಜ್ಞಾನ ಕೌಶಲ ಪ್ರದರ್ಶನವು ಜ.23 ರಿಂದ 29ರವರೆಗೆ ಹಮ್ಮಿಕೊಂಡಿರುವ ಅಂತರಾಷ್ಟ್ರೀಯ ಪ್ರದರ್ಶನದಲ್ಲಿ ಜಗತ್ತಿನ 23ದೇಶಗಳ ಸುಮಾರು 1100 ಕ್ಕೂ ಹೆಚ್ಚಿನ ಪ್ರದರ್ಶಕರು ಭಾಗಿಯಾಗಲಿದ್ದಾರೆ. ಭಾರತದ ಉತ್ಪಾದನ ಕ್ಷೇತ್ರವು ಕ್ರಾಂತಿಕಾರಕ ಅಭಿವೃದ್ಧಿಯತ್ತ ಮುಂದುವರೆಯುತ್ತಿದ್ದು, ಇದು ಭವಿಷ್ಯವನ್ನು ರೂಪಿಸುವ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಕೂಡಿದೆ. ಇಮ್ಟೆಕ್ಸ್ 2025, ಟೂಲ್​ಟೆಕ್ 2025 ಮತ್ತು ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ 2025 ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ (ಬಿಐಇಸಿ) ದಲ್ಲಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಉದ್ಯಮದ ನಾಯಕರ ಮತ್ತು ತಂತ್ರಜ್ಞಾನ ಪ್ರಿಯರಿಗೆ ಅತ್ಯುತ್ತಮ ವೇದಿಕೆಯನ್ನು ಒದಗಿಸಲಿದೆ. 23 ದೇಶಗಳಿಂದ 1,100 ಕ್ಕೂ ಹೆಚ್ಚಿನ ಪ್ರದರ್ಶಕರು ಈ ಮೇಳದಲ್ಲಿ ಭಾಗವಹಿಸುವುದರಿಂದ, ಇದು ಯಂತ್ರೋಪಕರಣಗಳು ಮತ್ತು ಡಿಜಿಟಲ್ ತಯಾರಿಕೆಗೆ ಸಂಬಂಧಿಸಿದ ತಂತ್ರಜ್ಞಾನಗಳ ಬೃಹತ್ ಪ್ರದರ್ಶನವಾಗಲಿದೆ. ಜರ್ಮನಿ, ಇಟಲಿ, ಜಪಾನ್, ಕೊರಿಯಾ, ಸ್ಪೇನ್, ತಾಯ್ವಾನ್ ಮತ್ತು ಅಮೆರಿಕಾ ಮತ್ತಿತರ ದೇಶಗಳು ತಮ್ಮ ತಂತ್ರಜ್ಞಾನದ ಪರಿಣತಿಯನ್ನು ಪ್ರದರ್ಶಿಸಲಿವೆ. ಇಮ್ಟೆಕ್ಸ್ ತನ್ನ ಸಾಮರ್ಥ್ಯದಿಂದಾಗಿ ಪ್ರಸಿದ್ಧವಾಗಿದೆ, ಇದು ಯಂತ್ರೋಪಕರಣಗಳ ಉದ್ಯಮದ ಜಾಗತಿಕ ನಾಯಕರನ್ನು ಒಟ್ಟುಗೂಡಿಸುತ್ತದೆ. ಈ ಸರಣಿಯಲ್ಲಿ 2 ಸಾವಿರಕ್ಕೂ ಹೆಚ್ಚಿನ ಪ್ರತಿನಿಧಿಗಳು ವಿವಿಧ ಕ್ಷೇತ್ರಗಳಿಂದ ಭಾಗವಹಿಸಲಿದ್ದಾರೆ.

ಇಮ್ಟೆಕ್ಸ್ ಪ್ರದರ್ಶನದ ವೈಶಿಷ್ಟ್ಯಗಳು

ಬೇಡಿಕೆಗಳಿಗನುಗುಣವಾಗಿ ಟೂಲ್​ಟೆಕ್ ಉಪಕರಣಗಳ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕರಗಳು ತೆರೆದುಕೊಳ್ಳಲಿವೆ.

ಡಿಜಿಟಲ್ ಮ್ಯಾನುಫ್ಯಾಕ್ಚರಿಂಗ್ ಪರಿಹಾರಗಳನ್ನು ಪ್ರದರ್ಶಿಸುವುದು, ಸ್ಮಾರ್ಟ್ ಫ್ಯಾಕ್ಟರಿಗಳಿಂದ ರೋಬೋಟಿಕ್ಸ್‌ವರೆಗಿನ ಬೆಳವಣಿಗೆಗಳು. ಅಕಾಡೆಮಿ ಮತ್ತು ಉದ್ಯಮದ ನಡುವೆ ಸೇತುವಾಗಿ ಕಾರ್ಯ ನಿರ್ವಹಿಸಲು ಈ ಪ್ರದರ್ಶನ ಪೂರಕವಾಗಲಿದೆ. ಜ.25ರಂದು ವಿಶೇಷವಾಗಿ ವಿದ್ಯಾರ್ಥಿಗಳ ತಯಾರಿಕಾ ಪ್ರಕ್ರಿಯೆ ಮತ್ತು ಪರಿಕಲ್ಪನೆಗಳ ಕುರಿತು ರಸಪ್ರಶ್ನೆ ಸ್ಪರ್ಧೆ.ಜ.25 ಮತ್ತು 26ರಂದು ಜಾಗತಿಕ ಖರೀದಿದಾರರೊಂದಿಗೆ ಸಂವಾದ. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಯಂತ್ರೋಪಕರಣ ಉದ್ಯಮದಲ್ಲಿನ ರಫ್ತು ಅವಕಾಶಗಳಿಗೆ ಉತ್ತೇಜನವನ್ನು ಗಮನದಲ್ಲಿರಿಸಿಕೊಂಡು ಯುವ ಉದ್ಯಮಿಗಳಿಗೆ ಪ್ರೋತ್ಸಾಹ. ವಿಶೇಷವಾಗಿ ಜ.24 ಮತ್ತು 25ರಂದು ಜಾಗತಿಕ ತಜ್ಞರಿಂದ ಚರ್ಚೆ ನಡೆಯಲಿದೆ.

"ತಯಾರಿಕಾ ಕ್ಷೇತ್ರವು ನಿರಂತರವಾಗಿ ಬೆಳೆಯುತ್ತಿದ್ದು, ಇಮ್ಟೆಕ್ಸ್ 2025 ಭಾರತದ ಪ್ರಗತಿಶೀಲ ತಯಾರಿಕಾ ಸಿದ್ಧತೆಗಳನ್ನು ಪ್ರದರ್ಶಿಸುತ್ತದೆ. ಹಾಗೂ ಯಂತ್ರೋಪಕರಣಗಳಿಂದ ಹಿಡಿದು, ಅತ್ಯಾಧುನಿಕ ಡಿಜಿಟಲ್ ಪರಿಹಾರಗಳವರೆಗೆ, ಈ ಪ್ರದರ್ಶನವು ಗುಣಮಟ್ಟ, ಖಚಿತತೆ ಮತ್ತು ದಕ್ಷತೆಯ ಪ್ರೇರಣೆಯನ್ನು ಹೆಚ್ಚಿಸುವ ತಂತ್ರಜ್ಞಾನಗಳ ಸಂಪೂರ್ಣ ಶ್ರೇಣಿಯನ್ನು ಅನಾವರಣಗೊಳಿಸಲಿದೆ " -ರಾಜೇಂದ್ರ ಎಸ್.ರಾಜಮಾನೆ, ಐಎಂಟಿಎಂಎ ಅಧ್ಯಕ್ಷ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net