

ನಿಪ್ಪಾಣಿ: ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಮಾನವನ ಬುದ್ಧಿಶಕ್ತಿ, ಭಾವನೆ ಮತ್ತು ಸೃಜನಶೀಲತೆ ಮೀರಿಸಲು ಸಾಧ್ಯವಿಲ್ಲ ಎಂದು ಚಿಕ್ಕೋಡಿ ಕೆಎಲ್‌ಇ ಸಂಸ್ಥೆಯ ತಾಂತ್ರಿಕ ಮಹಾವಿದ್ಯಾಯದ ಎಂಸಿಎ ವಿಭಾಗದ ಮುಖ್ಯಸ್ಥ ಸುನೀಲ ಶಿಂಧೆ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಪದವಿ ಮಹಾವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗ ಹಾಗೂ ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಜನರೇಟಿವ್ ಎಐ ಮತ್ತು ಪ್ರಾಂಪ್ಟ್ ಇಂಜಿನಿಯರಿಂಗ್ ವಿಷಯ ಕುರಿತು ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು. ಕೃತಕ ಬುದ್ಧಿಮತ್ತೆ (ಎಐ), ರೋಬಾಟ್, ಸ್ವಯಂಚಾಲಿತ ವ್ಯವಸ್ಥೆಗಳು ಮಾನವನ ದೈನಂದಿನ ಜೀವನವನ್ನು ಸುಲಭಗೊಳಿಸುತ್ತವೆ ಹೊರತು, ಮನಸ್ಸಿನ ಸೂಕ್ಷ್ಮ ವಿಚಾರ, ಕರುಣೆ ಹಾಗೂ ತೀರ್ಮಾನ ತಿಳಿಸುವ ಸಾಮರ್ಥ್ಯ ಹೊಂದಿಲ್ಲ. ಜನರೇಟಿವ್ ಎಐ ಹೊಸ ವಿಷಯ ಸೃಷ್ಟಿಸುವ ಸಾಮರ್ಥ್ಯ ಹೊಂದಿರುವ ಕೃತಕ ಬುದ್ಧಿಮತ್ತೆಯಾಗಿದೆ. ಇದು ಪಠ್ಯ, ಚಿತ್ರ, ಧ್ವನಿ, ವಿಡಿಯೋ, ಕೋಡ್ ಮುಂತಾದ ಹೊಸ ವಿಷಯ ನಿರ್ಮಿಸಬಲ್ಲವು. ಶಿಕ್ಷಣ, ಆರೋಗ್ಯ, ಕೃಷಿ, ಕೈಗಾರಿಕೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಕ್ರಾಂತಿ ಸಂಭವಿಸುತ್ತಿದ್ದರೂ, ಅಂತಿಮ ತೀರ್ಮಾನ ಮಾನವನನ್ನೇ ಅವಲಂಬಿಸಿದೆ ಎಂದರು.
ಪ್ರಾಚಾರ್ಯ ಡಾ.ಮಹಾಂತೇಶ ಹುರಳಿ ಮಾತನಾಡಿದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಯೋಜನಾ ಕಾರ್ಯದರ್ಶಿ ರೂಪಾಲಿ ಅಕ್ಕಿವಾಟೆ, ಅಭಿಜಿತ್ ತವಕರಿ, ಶಂಕರಮೂರ್ತಿ ಕೆ.ಎನ್.,ಸುಧೀರ ಕೋಠಿವಾಲೆ, ಡಾ.ಆನಂದ ಕೆಂಚಕ್ಕನವರ, ಡಾ.ಅಶೋಕ ರಾಠೋಡ, ಮಹೇಶ ಕೆಂಚಗೌಡರ ಇತರರಿದ್ದರು. ಪ್ರಿಯಾಂಕಾ ಹಾಗೂ ಸಂಗಡಿಗರು ಸ್ವಾಗತಗೀತೆ ಹಾಡಿದರು. ಕಾರ್ಯಾಗಾರದ ಸಂಯೋಜಕ ಸಾಗರ ಮಿರ್ಜೆ ಪರಿಚಯಿಸಿದರು. ಪ್ರನೀತಾ ಪಾಟೀಲ ಹಾಗೂ ಯಾಸಿನ್ ಮುಲ್ಲಾ ನಿರೂಪಿಸಿದರು. ವೈಷ್ಣವಿ ಪಾಟೀಲ ವಂದಿಸಿದರು.