

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊಸ ಆವಿಷ್ಕಾರ ಮತ್ತು ಅನ್ವೇಷಣೆಗಳಿಂದ ಸಾಕಷ್ಟು ಅಭಿವೃದ್ಧಿ ಮತ್ತು ಬೆಳವಣಿಗೆಯಾಗಿದ್ದು, ಮನುಷ್ಯ ತಂತ್ರಜ್ಞಾನವನ್ನು ಒಳ್ಳೆಯದು ಮತ್ತು ಕೆಟ್ಟದ್ದಕ್ಕೆ ಬಳಕೆ ಮಾಡುತ್ತಿದ್ದಾನೆ. ಹೊಸ ಅನ್ವೇಷಣೆಗಳು ಮತ್ತು ತಂತ್ರಜ್ಞಾನಗಳನ್ನು ಉತ್ತಮ ರೀತಿ ಬಳಸಿಕೊಂಡು ದೇಶದ ಅಭಿವೃದ್ಧಿ ಮಾಡಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯ ಕುಲಸಚಿವ ಡಾ. ಎ. ಚನ್ನಪ್ಪ ಹೇಳಿದರು.
ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಸಹಯೋಗದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಆವಿಷ್ಕಾರ ಇನ್ನೋವೇಶನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಮನುಷ್ಯನ ಎಲ್ಲ ಕಾರ್ಯಚಟುವಟಿಕೆಗಳು ರೋಬೋಟಿಕ್ಸ್ ಮತ್ತು ಕೃತಕ ಬುದ್ದಿಮತ್ತೆ ಮೇಲೆ ಅವಲಂಬಿತವಾಗಿರುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಉಪನ್ಯಾಸಗಳ ಪ್ರಯೋಜನ ಪಡೆದು ತಂತ್ರಜ್ಞಾನಗಳನ್ನು ಅರಿತು ಉತ್ತಮ ಅನ್ವೇಷಣೆಗಳನ್ನು ಮಾಡಬೇಕು ಎಂದರು.
ಟಿ.ಕೆ. ಮಧು, ಬಸವರಾಜ ಗಾಡದ, ಅವರು ರೋಬೋಟಿಕ್ಸ್ ಮತ್ತು ಡ್ರೋನ್ ತಂತ್ರಜ್ಞಾನ ಕುರಿತು ಪ್ರಾತ್ಯಕ್ಷಿಕೆಗಳ ಮೂಲಕ ಉಪನ್ಯಾಸ ನೀಡಿದರು. ಜಿಲ್ಲೆಯ ಡಿಪ್ಲೋಮಾ ವಿದ್ಯಾರ್ಥಿಗಳು, ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಿಬ್ಬಂದಿ, ಇತರರು ಇದ್ದರು.