

ಮೈಸೂರು: ದೇಶದ ಆಹಾರೋದ್ಯಮದ ಬೆಳವಣಿಗೆಗೆ ಹೊಸ ನಾವೀನ್ಯತೆಯಿಂದ ಕೂಡಿದ ತಂತ್ರಜ್ಞಾನಗಳ ಅವಶ್ಯಕತೆ ಇದೆ ಎಂದು ಕೃಷಿ ಮತ್ತು ಆಹಾರ ಕ್ಷೇತ್ರದ ತಂತ್ರಜ್ಞ ಎ.ರಾಮಕೃಷ್ಣ ಅಭಿಪ್ರಾಯಪಟ್ಟರು.
ನಗರದ ಇಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸಂಸ್ಥೆ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ತಾಂತ್ರಿಕ ವಿಚಾರ ಸಂಕಿರಣದಲ್ಲಿ ಮಾತನಾಡಿ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರ ಉತ್ಪನ್ನಗಳು ನಾಶವಾಗುತ್ತಿದ್ದು, ಅವುಗಳ ಸಂರಕ್ಷಣೆಗೆ ತಂತ್ರಜ್ಞಾನದ ಅವಶ್ಯಕತೆ ಇದೆ. ಇದರ ಜತೆಗೆ ಆಹಾರ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಕಾರ್ಯ ಸಹ ಅಗಬೇಕು ಎಂದರು.
ನಾವು ಸೇವಿಸುವ ಆಹಾರಕ್ಕೂ ನಮ್ಮ ಆರೋಗ್ಯಕ್ಕೂ ನೇರ ಸಂಬಂಧವಿದೆ. ಹೀಗಾಗಿ ಮಣ್ಣಿನ ಫಲವತ್ತತೆ ಉಳಿಸುವ ಹಾಗೂ ಅತಿಯಾದ ರಾಸಾಯನಿಕ ಬಳಕೆ ತಪ್ಪಿಸುವ ಅವಶ್ಯಕತೆ ಇದೆ. ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಹೇಗೆ ಕೃಷಿ ಮಾಡಬೇಕು ಎಂಬ ಕುರಿತು ಕೃಷಿಕರಿಗೆ ಮಾಹಿತಿ ನೀಡುವ ಕಾರ್ಯ ಆಗಬೇಕು ಎಂದರು.
ಪಾಶ್ಚಿಮಾತ್ಯ ಜಗತ್ತಿನ ಆಹಾರಗಳನ್ನು ಸೇವಿಸುವ ಬದಲು ನಮ್ಮ ದೇಶದ ಆಹಾರ ಉತ್ಪನ್ನಗಳನ್ನು ಸೇವಿಸಲು ಜನರು ಆಸಕ್ತಿ ತೋರಬೇಕು. ಪಾಶ್ಚಿಮಾತ್ಯ ಜಗತ್ತಿನ ಆಹಾರಗಳ ಸೇವನೆಯಿಂದ ನಮ್ಮ ಆರೋಗ್ಯವೂ ಹಾಳಾಗುತ್ತಿದೆ. ಸ್ಥಳೀಯವಾಗಿ ಪೌಷ್ಠಿಕಾಂಶದಿಂದ ಕೂಡಿದ ಹಲವಾರು ಆಹಾರಗಳು ಇದ್ದು, ಅವುಗಳನ್ನು ಬಳಸಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಸಂಚಾಲಕ ಎ.ಎಸ್. ಸತೀಶ್, ಕಾರ್ಯದರ್ಶಿ ಡಾ.ಎಸ್.ಎ. ಮೋಹನ್‌ಕೃಷ್ಣ, ಮಾಜಿ ಅಧ್ಯಕ್ಷ ಬಿ.ಎಸ್. ಪ್ರಭಾಕರ್, ಮಾಜಿ ಕಾರ್ಯದರ್ಶಿ ಕೆ.ಬಿ. ಭಾಸ್ಕರ್ ಇದ್ದರು.