

ವಿಜಯವಾಣಿ ಸುದ್ದಿಜಾಲ ತೂಬಗೆರೆ
ಮಣ್ಣು ಆರೋಗ್ಯ ಮತ್ತು ಲವತ್ತತೆಯಿಂದ ಕೂಡಿರಲು ಕೊಟ್ಟಿಗೆ ಗೊಬ್ಬರ ಹಾಗೂ ಸಾವಯವ ಗೊಬ್ಬರ ಹೆಚ್ಚಾಗಿ ಬಳಸಬೇಕು ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎಸ್.ವಿ.ಸುರೇಶ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬುಧವಾರ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ವತಿಯಿಂದ ಹಮ್ಮಿಕೊಂಡಿದ್ದ 2024-25 ನೇ ಸಾಲಿನ ಮುಂಗಾರು ತಾಂತ್ರಿಕ ಆಂದೋಲನದಲ್ಲಿ ಮಾತನಾಡಿದರು.
ಮಣ್ಣಿನ ಸಾವಯವ ಇಂಗಾಲ ಶೇ.0.3 ಇದೆ. ರೈತರು ಇದನ್ನು ಶೇ. 0.8 ವೃದ್ಧಿಗೊಳಿಸಲು ಹೆಚ್ಚು ಕೊಟ್ಟಿಗೆ ಗೊಬ್ಬರ ಹಾಗೂ ಇತರ ಸಾವಯವ ಗೊಬ್ಬರವನ್ನು ಮಿಶ್ರಣ ಮಾಡಬೇಕು ಎಂದರು.
ಬೆಂಗಳೂರು ವ್ಯಾಪ್ತಿಯ ಹತ್ತು ಜಿಲ್ಲೆಗಳಲ್ಲಿ ಮುಂಗಾರು ತಾಂತ್ರಿಕ ಆಂದೋಲನವನ್ನು ಏಕಕಾಲದಲ್ಲಿ ಕೃಷಿ ಅಭಿವೃದ್ಧಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಕೃಷಿ ವಿಶ್ವವಿದ್ಯಾನಿಲಯ ಬಿಡುಗಡೆ ಮಾಡಿದ ನೂತನ ತಳಿಯ ಬೀಜಗಳು ಮತ್ತು ತಂತ್ರಜ್ಞಾನಗಳ ಕುರಿತಂತೆ ಸಕಾಲದಲ್ಲಿ ಅರಿವು ಮೂಡಿಸುವುದರ ಜತೆಗೆ ಬೀಜಗಳನ್ನು ಕನಿಷ್ಠ ದರದಲ್ಲಿ ಮಾರಾಟ ಮಾಡಿ ಸಕಾಲದಲ್ಲಿ ಮುಂಗಾರು ಬಿತ್ತನೆ ಕೈಗೊಳ್ಳಲು ಅನುವು ಮಾಡಿಕೊಡಲಾಗಿದೆ ಎಂದರು.
ಕೃಷಿ ವಿಜ್ಞಾನಿ ಡಾ. ಪಿ.ವೀರನಾಗಪ್ಪ ಮಾತನಾಡಿ, ಕೃಷಿ ವಿಶ್ವವಿದ್ಯಾನಿಲಯದಿಂದ ಬಿಡುಗಡೆಗೊಂಡ ನೂತನ ತಳಿಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮತ್ತು ಅಭಿವೃದ್ಧಿ ಇಲಾಖೆಗಳ ವಿಸ್ತರಣಾಧಿಕಾರಿಗಳಿಗೆ ತಾಂತ್ರಿಕ ಅರಿವು ಮೂಡಿಸುವುದು ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.
ಹಾಡೋನಹಳ್ಳಿ ಗ್ರಾಪಂ ಅಧ್ಯಕ್ಷ ಎಚ್.ಎ.ನಾಗರಾಜು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರ ಮತ್ತು ಕೃಷಿ ಇಲಾಖೆಯ ಸಹಯೋಗದೊಂದಿಗೆ ನಡೆಯುವ ಕಾರ್ಯಕ್ರಮಗಳು ಹೆಚ್ಚು ಪ್ರಯೋಜನಕಾರಿಯಾಗಿರುತ್ತದೆ ಎಂದರು.