ತಂತ್ರಜ್ಞರು ಆರೋಗ್ಯ ಇಲಾಖೆ ಆಧಾರಸ್ತಂಭ: ಡಿಎಚ್‌ಒ ಡಾ.ಚಂದ್ರಿಕಾ

12 TMK LAb
Published on

ತುಮಕೂರು: ರೋಗಪತ್ತೆಯಲ್ಲಿ ವೈದ್ಯರಿಗೆ ಆಧಾರವಾಗಿರುವ ಟೆಕ್ನಾಲಜಿಸ್ಟ್‌ಗಳ ಪಾತ್ರ ಮಹತ್ವದ್ದಾಗಿದೆ, ವೈದ್ಯರು ಚಿಕಿತ್ಸೆ ನೀಡಲು ತಂತ್ರಜ್ಞರ ವರದಿಯೇ ಆಧಾರವಾಗಿದ್ದು, ಆರೋಗ್ಯ ಇಲಾಖೆ ಆಧಾರಸ್ತಂಭಗಳಾಗಿ ತಂತ್ರಜ್ಞರಿದ್ದಾರೆ ಎಂದು ಡಿಎಚ್‌ಒ ಡಾ.ಚಂದ್ರಿಕಾ ಹೇಳಿದರು.

ರಾಜ್ಯ ಸರ್ಕಾರಿ ವೈದ್ಯಕೀಯ ಪ್ರಯೋಗಶಾಲಾ ಟೆಕ್ನಾಲಾಜಿಸ್ಟ್ ಕೇಂದ್ರ ಸಂಘದ ಜಿಲ್ಲಾ ಶಾಖೆ ಭಾನುವಾರ ನಗರದ ಕನ್ನಡ ಭವನದಲ್ಲಿ ಆಯೋಜಿಸಿದ್ದ ಕ್ಯಾಲೆಂಡರ್, ಡೈರಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂತ್ರಜ್ಞರ ಸಹಕಾರದಿಂದ ಜಿಲ್ಲೆಯಲ್ಲಿ ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿದೆ, ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ಸದಾ ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದು, ಇಂತಹ ಕಾರ್ಯಕ್ರಮಗಳು ಮತ್ತಷ್ಟು ಕೆಲಸ ಮಾಡಲು ಚೈತನ್ಯ ತುಂಬುತ್ತದೆ ಎಂದರು. ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಪುರುಷೋತ್ತಮ್ ಮಾತನಾಡಿ, ಸಂಘಟನೆಗಳು ಉತ್ತಮ ಧ್ಯೇಯದೊಂದಿಗೆ ರಚಿತವಾಗಿದ್ದು, ಎಲ್ಲರಿಗೂ ಸಾಮಾಜಿಕ ಭದ್ರತೆ, ಕಾನೂನು ಚೌಕಟ್ಟಿನಲ್ಲಿ ರಕ್ಷಣೆ ಮುಖ್ಯ ಎಂದರು.

ಸಾಮಾಜಿಕ ಜವಾಬ್ದಾರಿ ಜತೆಗೆ ಕಾನೂನು ಚೌಕಟ್ಟಿನಲ್ಲಿ ಇಲಾಖೆಯನ್ನು ಸದೃಢಗೊಳಿಸಬೇಕು, ವ್ಯಕ್ತಿತ್ವ ವಿಕಸನದ ಜತೆಗೆ ಬೌದ್ಧಿಕ ಮಟ್ಟ ಉತ್ತಮಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಆಯಾ ಕಾಲಕ್ಕೆ ತಕ್ಕಂತೆ ಪ್ರತಿಭೆ ಹೆಚ್ಚಿಸಿಕೊಳ್ಳಬೇಕು, ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸಬೇಕು, ಸಂಘ ಸ್ಥಾಪಿಸಿಕೊಳ್ಳುವುದೇ ಸಾಧನೆಯಾಗದೆ ಸಂಘಟಿತರಾಗಲು ಇದು ನೆರವಾಗಬೇಕು ಎಂದರು.

ಡಾ.ಕೇಶವರಾಜ್ ಮಾತನಾಡಿ, ಸಂಘವನ್ನು ಒಗ್ಗೂಡಿಸಲು ನೆಪವಾಗಿ ಮಾಡುವ ಕಾರ್ಯಕ್ರಮಗಳು ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗಲಿ, ಕಾರ್ಯಕ್ರಮ ಆಯೋಜಿಸುವ ಸವಾಲು ಭವಿಷ್ಯದಲ್ಲಿ ನಿಮ್ಮಲ್ಲಿ ನಾಯಕತ್ವ ಬೆಳೆಸುತ್ತದೆ ಎಂದರು. ಸಂಘದ ಜಿಲ್ಲಾಧ್ಯಕ್ಷ ಪದ್ಮಣ್ಣ, ರಾಜ್ಯಾಧ್ಯಕ್ಷ ಪುಟ್ಟರಾಜು, ಸಂಘಟನಾ ಕಾರ್ಯದರ್ಶಿ ಚೆಲುವರಾಜು, ಡಾ.ಕೇಶವರಾಜು, ಡಾ.ಮಹಿಮಾ, ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್, ಗೌರವಾಧ್ಯಕ್ಷ ದ್ಯಾಮಣ್ಣ, ಸಹಕಾರ್ಯದರ್ಶಿ ಅನಂತರಾಮು ಇದ್ದರು.

ಸಂಘ, ಸಂಸ್ಥೆಗಳ ಪದಾಧಿಕಾರಿಗಳು ವೈಯಕ್ತಿಕ ಹಿತಾಸಕ್ತಿಗೆ ಮುಂದಾದರೆ ಸಂಘ ಹಾಳಾಗುತ್ತವೆ, ಹದಗೆಡುತ್ತಿರುವ ಸಮಾಜದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿದೆ. ಹಣ, ಜಾತಿ, ತೋಳುಬಲ ಎಲ್ಲ ಇಲಾಖೆಗೂ ಕಾಲಿಟ್ಟಿರುವುದು ವಿಷಾದನೀಯ. ಡಾ.ಪುರುಷೋತ್ತಮ್ ಜಿಲ್ಲಾ ಕಾರ್ಯಕ್ರಮಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net