

ಮಂಡ್ಯ: ಅಂತ್ಯೋದಯ ಅನ್ನ ಯೋಜನೆ(ಎಎವೈ) ಮತ್ತು ಆದ್ಯತಾ (ಪಿಎಚ್‌ಎಚ್) ಪಡಿತರ ಚೀಟಿಗಳ ಪ್ರತಿ ಫಲಾನುಭವಿಗಳಿಗೆ ಎನ್ ಎಫ್‌ಎಸ್‌ಎ ಯೋಜನೆಯಡಿ ವಿತರಿಸಲಾಗುವ 5 ಕೆ.ಜಿ ಅಕ್ಕಿಯೊಂದಿಗೆ ಹೆಚ್ಚುವರಿಯಾಗಿ 5 ಕೆ.ಜಿ ಅಕ್ಕಿಯನ್ನು ರಾಜ್ಯ ಸರ್ಕಾರದ ವತಿಯಿಂದ ಉಚಿತವಾಗಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಡಿತರ ಚೀಟಿಗಳಲ್ಲಿ ನ್ಯೂನ್ಯತೆಗಳಿದ್ದರೆ ಸರಿಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಕುಮಾರ ಮಾಹಿತಿ ನೀಡಿದ್ದಾರೆ.
ಅಗತ್ಯವಿರುವ ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಿಂದ ಖರೀದಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲು ಕಾಲಾವಕಾಶ ಬೇಕಿರುವುದರಿಂದ ಫಲಾನುಭವಿಗಳಿಗೆ ಹೆಚ್ಚುವರಿ 5 ಕೆ.ಜಿ ಅಕ್ಕಿಯ ಬದಲು ಪ್ರತಿ ಕೆಜಿಗೆ 34 ರೂನಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲು ಸರ್ಕಾರದಿಂದ ಆದೇಶವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಹಾಗೂ ಆದ್ಯತಾ ಪಡಿತರ ಚೀಟಿಗಳ ಪೈಕಿ ಡಿಬಿಟಿ ಮುಖಾಂತರ ಹಣ ವರ್ಗಾವಣೆಗೆ ಸಂಬಂಧಿಸಿದಂತೆ 38,048 ಕಾರ್ಡ್‌ಗಳಲ್ಲಿ ನ್ಯೂನ್ಯತೆಗಳು ಕಂಡುಬಂದಿರುವುದಾಗಿ ಮಾಹಿತಿ ಬಂದಿದೆ. ಆದ್ದರಿಂದ ನಿಷ್ಕ್ರಿಯ ಕಾರ್ಡ್‌ಗೆ ಸಂಬಂಧಿಸಿದಂತೆ ಫಲಾನುಭವಿಗಳು ಕಡ್ಡಾಯವಾಗಿ ಬ್ಯಾಂಕ್‌ಗೆ ಹೋಗಿ ಆಧಾರ್‌ಕಾರ್ಡ್, ಮೊಬೈಲ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆಗೆ ಇಕೆವೈಸಿ ಮಾಡಿಸಬೇಕು.
ಅಂತೆಯೆ ನಾನ್ ಇನ್‌ಆಕ್ಟಿವ್ ಇನ್ ಡಿಬಿ ಪ್ರಕರಣಗಳಲ್ಲಿ ಫಲಾನುಭವಿಗಳು ಕಡ್ಡಾಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಅಥವಾ ಫೋಸ್ಟ್ ಆಫೀಸ್‌ನಲ್ಲಿ ಹೊಸ ಬ್ಯಾಂಕ್ ಖಾತೆ ತೆರೆಯಬೇಕು. ಇನ್ನು ನಾಟ್ ವ್ಯಾಲಿಡ್ ಆಧಾರ್‌ನಂಬರ್ ಫಲಾನುಭವಿಗಳಿಂದ ಕಡ್ಡಾಯವಾಗಿ ಅವರ ಆಧಾರ್ ಕಾರ್ಡ್ ಪ್ರತಿಯನ್ನು ತಾಲೂಕು ಕಚೇರಿಗೆ ನೀಡಬೇಕು. ಆದ್ದರಿಂದ ಪಡಿತರ ಚೀಟಿದಾರರು ಈ ಬಗ್ಗೆ ಪರಿಶೀಲಿಸಿಕೊಂಡು ತಮ್ಮ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳನ್ನು ನೀಡಿ ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಒಂದು ವೇಳೆ ಖಾತೆ ತೆರೆಯದೇ ಇದ್ದಲ್ಲಿ ಐಬಿಪಿಎಸ್ ಯೋಜನೆಯಡಿ 200 ರೂ ಪಾವತಿಸಿ ಖಾತೆಯನ್ನು 10 ನಿಮಿಷಗಳಲ್ಲಿ ತೆರೆಯಬಹುದಾಗಿದೆ. ಮಾಹಿತಿಗೆ ಅಂಚೆ ಇಲಾಖೆ ವ್ಯವಸ್ಥಾಪಕ ಗಿರೀಶ್ ಅವರ ಮೊ.ಸಂ 8197558329 ಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.