ಕಾವೇರಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ; ನಾಗರಿಕರ ಪರದಾಟ

20Kgfph-1a
Published on

ಕೆಜಿಎಫ್: ಕಳೆದ ವರ್ಷ ಜಾರಿಗೆ ತಂದಿರುವ ಕಾವೇರಿ 2.0 ತಂತ್ರಾಂಶ ನೋಂದಣಿಗೆ ಸಂಬಂಧಿಸಿದಂತೆ ಕ್ರಾಂತಿಕಾರಿ ಬದಲಾವಣೆ ಆಗಿದ್ದರೂ ಸಹ ಕಳೆದ ಹಲವು ದಿನಗಳಿಂದ ಅಪ್‌ಗ್ರೇಡ್ ಮತ್ತು ವಿವಿಧ ತಾಂತ್ರಿಕ ಬದಲಾವಣೆಗಳಿಂದ ನಿರಂತರವಾಗಿ ಸರ್ವರ್‌ಡೌನ್ ಸಮಸ್ಯೆ ಎದುರಿಸುತ್ತಿದ್ದು, ಉಪ ನೋಂದಣಾಧಿಕಾರಿಗಳ ಕಚೇರಿಗೆ ಬರುವ ನಾಗರಿಕರು ಇನ್ನಿಲ್ಲದ ಸಂಕಷ್ಟ ಎದುರಿಸುವಂತಾಗಿದೆ.


2023ರ ಫೆಬ್ರವರಿಯಲ್ಲಿ ಪರಿಚಯಿಸಲಾಗಿರುವ ಕಾವೇರಿ 2.0 ತಂತ್ರಾಂಶದಲ್ಲಿ ಯಾವುದೇ ಸರ್ವರ್ ಸಮಸ್ಯೆ ಇರುವುದಿಲ್ಲ ಎಂದು ಹೇಳಲಾಗುತ್ತಿದ್ದರೂ ಸಹ ಆಗಿಂದ್ದಾಗ್ಗೆ ಸರ್ವರ್ ಕೈ ಕೊಡುತ್ತಿರುವುದರಿಂದ ದೂರದ ಊರುಗಳಿಂದ ಆಸ್ತಿ, ಸ್ಥಿರಾಸ್ತಿ, ಕರಾರು ಪತ್ರ, ಸಾಲ ತೀರುವಳಿ, ಋಣಭಾರ ರಾಹಿತ್ಯ ಪತ್ರ ಹಾಗೂ ಸಾಗುವಳಿ ಜಮೀನು ಒಪ್ಪಂದ ನೋಂದಣಿ ಕಾರ್ಯಗಳಿಗಾಗಿ ಬರುವ ಸಾರ್ವಜನಿಕರು ಕಚೇರಿ ಮುಂದೆ ಚಾತಕ ಪಕ್ಷಿಗಳಂತೆ ಗಂಟೆಗಟ್ಟಲೆ ಕಾದು ಬರಿಗೈಲಿ ವಾಪಸ್ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ.


ಸಾರ್ವಜನಿಕರು ನೇರವಾಗಿ ಸಿಟಿಜನ್ ಪೋರ್ಟಲ್‌ನಲ್ಲಿ ತಮ್ಮ ದಸ್ತಾವೇಜುಗಳನ್ನು ಅಪ್‌ಲೋಡ್ ಮಾಡಿ, ನಿಗದಿತ ದಿನಾಂಕದಂದು ತಮಗೆ ಅನುಕೂಲವಾಗುವ ಸಮಯಕ್ಕೆ ಸಮೀಪದ ಉಪ ನೋಂದಣಾಧಿಕಾರಿಗಳ ಕಚೇರಿಗೆ ಭೇಟಿ ನೀಡಿ ನೋಂದಣಿ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದಾಗಿತ್ತು. ಆದರೆ ಇಲಾಖೆ ಇತ್ತೀಚೆಗೆ ಕಾವೇರಿ 2.0 ತಂತ್ರಾಂಶದಲ್ಲಿ ದಿನಕ್ಕೊಂದು ಬದಲಾವಣೆ ಮಾಡುತ್ತಿದ್ದು, ಪೂರ್ವ ನಿಗದಿತವಾಗಿ ಸಾರ್ವಜನಿಕರು ತಮ್ಮ ದಸ್ತಾವೇಜುಗಳನ್ನು ಕಾವೇರಿ 2.0 ತಂತ್ರಾಂಶದಲ್ಲಿ ಅಪ್‌ಲೋಡ್ ಮಾಡಿ, ಉಪನೋಂದಣಾಧಿಕಾರಿಗಳ ಪರಿಶೀಲನೆ ಬಳಿಕ ನಿಗದಿತ ಶುಲ್ಕ ಪಾವತಿಸಿ, ದಿನಾಂಕವನ್ನು ಆಯ್ಕೆ ಮಾಡಿದ ಕೂಡಲೇ ತಾನೇ ತಾನಾಗಿ ಪ್ರದರ್ಶನವಾಗುವ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.


ಇಷ್ಟೆಲ್ಲಾ ಹರಸಾಹಸ ವಾಡಿದ ಬಳಿಕ ಪೂರ್ವ ನಿರ್ಧಾರಿತ ಸಮಯಕ್ಕೆ ಉಪ ನೋಂದಣಾಧಿಕಾರಿಗಳ ಕಚೇರಿಗೆ ಹೋದರೆ ಅಲ್ಲಿ ಎದುರಾಗುವ ಸರ್ವರ್ ಡೌನ್ ಸಮಸ್ಯೆಯಿಂದ ಸಮಯಕ್ಕೆ ಸರಿಯಾಗಿ ನೋಂದಣಿ ಕಾರ್ಯ ಮಾಡಲು ಸಾಧ್ಯವಾಗದೇ ಕೆಲಸ ಕಾರ್ಯಗಳನ್ನು ಬಿಟ್ಟು ದೂರದ ಊರುಗಳಿಂದ ಬಂದಿರುವವರು ಇಲಾಖೆಗೆ ಹಿಡಿಶಾಪ ಹಾಕುತ್ತಾ, ಬರಿಗೈಲಿ ವಾಪಸ್ಸಾಗಿ, ಮತ್ತೊಂದು ದಿನ ನೋಂದಣಿ ದಿನಾಂಕ ನಿಗದಿಪಡಿಸುವ ಅನಿವಾರ್ಯತೆ ಎದುರಾಗಿದೆ. ಇಲಾಖೆ ಕೂಡಲೇ ಈ ಸಮಸ್ಯೆಗೆ ಮುಕ್ತಿ ದೊರಕಿಸಿ ನೋಂದಣಿ ಕಾರ್ಯ ಸುಗಮಗೊಳಿಸಬೇಕು ಎಂದು ನಾಗರಿಕರು ಮನವಿ ಮಾಡಿದ್ದಾರೆ.

ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಇಡೀ ರಾಜ್ಯಾದ್ಯಂತ ಒಂದೇ ಸರ್ವರ್ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ರೀತಿಯ ಸಮಸ್ಯೆ ಇಲ್ಲ. ಕೆಜಿಎಫ್‌ನಲ್ಲಿ ಸರ್ವರ್ ಸಮಸ್ಯೆಯಾಗಿರುವುದು ನನ್ನ ಗಮನಕ್ಕೆ ಬಂದಿಲ್ಲ. ಉಪ ನೋಂದಣಾಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಇದ್ದಲ್ಲಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು
ಶ್ರೀನಿಧಿ, ಜಿಲ್ಲಾ ನೋಂದಣಾಧಿಕಾರಿ, ಕೋಲಾರ

ವಿವಿಧ ಸೇವೆಗಳನ್ನು ಕಾವೇರಿ 2.0 ತಂತ್ರಾಂಶದೊಂದಿಗೆ ಅಳವಡಿಸುತ್ತಿರುವುದರಿಂದ ಸರ್ವರ್ ಸಮಸ್ಯೆ ಪದೇಪದೆ ಎದುರಾಗುತ್ತಿದೆ. ಬ್ಯಾಂಡ್ ವಿಡ್ತ್ ಪ್ರವಾಣಕ್ಕನುಗುಣವಾಗಿ ಸೇವೆ ನಿಗದಿಪಡಿಸಿದಲ್ಲಿ ಸಮಸ್ಯೆ ಉಂಟಾಗಲಾರದು. ಒದಗಿಸುತ್ತಿರುವ ಸೇವೆಗಳಿಗೆ ಅನುಗುಣವಾಗಿ ಸರ್ವರ್ ಬ್ಯಾಂಡ್ ವಿಡ್ತ್‌ನ್ನು ಹೆಚ್ಚುಗೊಳಿಸಲು ಕ್ರಮ ಕೈಗೊಂಡಲ್ಲಿ ಸರ್ವರ್ ಸಮಸ್ಯೆ ಉಂಟಾಗದು.
ವಿಜಯರಾಘವರೆಡ್ಡಿ, ದಸ್ತಾವೇಜು ನೋಂದಣಿಗೆ ಬಂದಿದ್ದ ನಾಗರಿಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net