ಸಮೀಕ್ಷೆಗೆ ಎದುರಾದ ತಾಂತ್ರಿಕ ಸಮಸ್ಯೆ

Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಆಪ್​ನಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆಯಿಂದಾಗಿ ಧಾರವಾಡ ಜಿಲ್ಲೆಯಲ್ಲಿ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯು ಮೊದಲ ದಿನ ನಿರೀಕ್ಷಿತ ಪ್ರಗತಿ ಸಾಧಿಸಲಿಲ್ಲ.

ಸರ್ವರ್ ಸಮಸ್ಯೆ ಹಾಗೂ ಒಟಿಪಿ (ಓನ್ ಟೈಮ್ ಪಾಸ್​ವರ್ಡ್) ಸೃಜನೆಯಲ್ಲಿ ವಿಳಂಬವಾಗಿದ್ದರಿಂದ ಸಮೀಕ್ಷೆದಾರರು ಹಾಗೂ ಸಾರ್ವಜನಿಕರು ಪೇಜಿಗೆ ಸಿಲುಕಿದರು. ಪ್ರತಿ ಸಮೀಕ್ಷೆದಾರರಿಗೆ 150 ಮನೆಗಳನ್ನು ನೀಡಲಾಗಿದೆ. ಆದರೆ, ಕೆಲವರಿಗೆ ಆಪ್​ನಲ್ಲಿ ಮನೆಗಳ ಹಂಚಿಕೆ ಆಗಲಿಲ್ಲ. ಮನೆಗೆ ತೆರಳಿ ಸಮೀಕ್ಷೆ ಕೈಗೊಂಡಾಗ ಒಂದು-ಒಂದೂವರೆ ತಾಸು ಕಳೆದರೂ ಒಟಿಪಿ ಸೃಜನೆ ಆಗಲಿಲ್ಲ. ಸಮೀಕ್ಷೆಯ ಮೊದಲ ದಿನವಾಗಿದ್ದರಿಂದ ಹಾಗೂ ರಾಜ್ಯದೆಲ್ಲೆಡೆ ಏಕ ಕಾಲಕ್ಕೆ ಆಪ್ ಓಪನ್ ಮಾಡಿರುವ ಪರಿಣಾಮ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂದು ಹೇಳಲಾಗುತ್ತಿದೆ.

ನಗರದ ಘಂಟಿಕೇರಿಯ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆ ನಂ.5ರಲ್ಲಿ ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ ಗಸ್ತೆ ಸಮೀಕ್ಷೆದಾರರಿಗೆ ಸಮೀಕ್ಷಾ ಸಾಮಗ್ರಿಗಳನ್ನು ವಿತರಿಸಿ, ಸಮೀಕ್ಷೆಗೆ ಚಾಲನೆ ನೀಡಿದರು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಮಧ್ಯಾಹ್ನದವರೆಗೂ ಸಮೀಕ್ಷೆ ಆರಂಭಿಸಲು ಸಾಧ್ಯವಾಗಲಿಲ್ಲ. ಪ್ರತಿ ಸಮೀಕ್ಷೆದಾರರಿಗೆ ಗುರುತಿನ ಚೀಟಿ, ಮಾಹಿತಿ ಕೈಪಿಡಿ, ದೃಢೀಕರಣ ಪತ್ರ ಇರುವ ಕಿಟ್ ವಿತರಿಸಲಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿ ಉಸ್ತುವಾರಿ ಸಚಿವರು ಹಾಗೂ ತಾಲೂಕು ಮಟ್ಟದಲ್ಲಿ ಶಾಸಕರು ಸಮೀಕ್ಷಾ ಕಾರ್ಯಕ್ಕೆ ಚಾಲನೆ ನೀಡಬೇಕಿತ್ತು. ಆದರೆ, ಮೈಸೂರು ದಸರಾ ಆರಂಭದ ಹಿನ್ನೆಲೆಯಲ್ಲಿ ಇದು ಸಾಧ್ಯವಾಗಲಿಲ್ಲ.

‘‘ಧಾರವಾಡ ಜಿಲ್ಲೆಯಲ್ಲಿ 5.46 ಲಕ್ಷ ಮನೆಗಳಿಗೆ ತೆರಳಿ ಸಮೀಕ್ಷೆ ನಡೆಸಬೇಕಿದೆ. ಮೊದಲ ದಿನ ಸರ್ವರ್ ಸಮಸ್ಯೆ ಹಾಗೂ ಒಟಿಪಿ ಸೃಜನೆಯಲ್ಲಿ ವಿಳಂಬವಾಗಿರುವ ಕುರಿತು ದೂರುಗಳು ಬಂದಿವೆ. ಹಾಗಾಗಿ ಜಿಲ್ಲೆಯಲ್ಲಿ ಇಂದು ಎಷ್ಟು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಾಗಿದೆ ಎಂಬುದರ ಬಗ್ಗೆ ನಿಖರ ಲೆಕ್ಕ ಸಿಕ್ಕಿಲ್ಲ. ಮಂಗಳವಾರ ಸಮಸ್ಯೆ ಹರಿಯಲಿದೆ’’ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ‘ವಿಜಯವಾಣಿ’ಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net