

ಬಸವನಬಾಗೇವಾಡಿ: ರಾಜ್ಯ ಗ್ರಾಮಾಡಳಿತ ಅಧಿಕಾರಿಗಳ ಕೇಂದ್ರ ಸಂಘದ ಸೂಚನೆ ಮೆರೆಗೆ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್ ಕಚೇರಿಯ ಹೊರ ಆವರಣದಲ್ಲಿ ಗ್ರಾಮಾಡಳಿತ ಅಧಿಕಾರಿಗಳು ಸಮಸ್ಯೆಗಳ ನಿವಾರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಗುರುವಾರ ಕೈಗೆ ಕಪ್ಪು ಬಟ್ಟೆ ಧರಿಸಿ ಧರಣಿ ನಡೆಸಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ರಾಜ್ಯ ಗ್ರಾಮಾಡಳಿತಾಧಿಕಾರಿಗಳ ಕೇಂದ್ರ ಸಂಘದ ಸಂಘಟನಾ ಕಾರ್ಯದರ್ಶಿ ಸಂತೋಷ ಕುಂಟೊಜಿ ಮಾತನಾಡಿ, ಗ್ರಾಮಾಡಳಿತಾಧಿಕಾರಿಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಪ್ರತಿಯೊಂದು ಯೋಜನೆ ಮತ್ತು ಕೆಲಸ ಕಾರ್ಯಗಳನ್ನು ಮಾಡುತ್ತ ಬಂದಿದ್ದಾರೆ. ಅವರ ಕೆಲಸ ಕಾರ್ಯಕ್ಕೆ ತಕ್ಕಂತೆ ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನ ಶ್ರೇಣಿ ನಿಗದಿ ಪಡಿಸಬೇಕು. ಸುಸಜ್ಜಿತ ಕಚೇರಿ ಸೇರಿ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ನೂರಾರು ಬೇಡಿಕೆಗಳಲ್ಲಿ 10-15 ಬೇಡಿಕೆಗಳನ್ನಾದರೂ ಸರ್ಕಾರ ಈಡೇರಿಸದೆ ಹೋದಲ್ಲಿ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ತಾಲೂಕಾಧ್ಯಕ್ಷ ಸಿದ್ದು ಶಿರಶ್ಯಾಡ, ಕಾರ್ಯದರ್ಶಿ ಬಸವರಾಜ ಕಾಮತ, ಲೋಹಿತ ಬಹಿರಗೊಂಡ, ಸಂತೋಷ ಸುನಗೊಂಡ, ಶಿವಾನಂದ ಹಳ್ಳೂರ, ಮಲ್ಲನಗೌಡ ಪಾಟೀಲ, ಕಾಚನಾ ಸಂದಿಮನಿ, ಶಕುಂತಲಾ ಇಬ್ರಾಹಿಂಪುರ, ವಿದ್ಯಾ ಅವಟಿ, ಅಮೃತಾ ಗೊಳಪ್ಪಗೊಳ, ನೂರಜಾನ್ ಚಪ್ಪರಬಂದ್, ಅಂಜುಮ್ ಅವಟಿ, ಕಂದಾಯ ನಿರೀಕ್ಷಕ ಜಗದೀಶ ಹಾರಿವಾಳ, ಸಂತೋಷ ದೇಸಾಯಿ, ಅಲ್ಲಾಭಕ್ಷ ಕೊರಬು, ಅಕ್ಕಬರ್ ವಾಲಿಕಾರ, ಬಾಳು ಜಮಖಂಡಿ, ಸಚಿನ ದೊಡ್ಡಮನಿ ಇತರರಿದ್ದರು. ಕಂದಾಯ ಇಲಾಖೆ ವಿವಿಧ ಘಟಕಗಳ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದರು.