

ಪ್ರಶಾಂತ ಭಾಗ್ವತ ಉಡುಪಿ
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸೆ.22ರಿಂದ ಆರಂಭಗೊಂಡಿದ್ದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಇನ್ನೂ ಸಮರ್ಪಕ ಹಾಗೂ ಪೂರ್ಣರೂಪದಲ್ಲಿ ಎಲ್ಲಿಯೂ ಆರಂಭವೇ ಆಗಿಲ್ಲ.
ನಿಯೋಜನೆಗೊಂಡ ಶಿಕ್ಷಕರಿಗೆ ಮನೆಗಳ ಪಟ್ಟಿಯನ್ನೂ ನೀಡಿಲ್ಲ. ಸಮೀಕ್ಷೆಗಾಗಿ ನೀಡಿರುವ ಮೊಬೈಲ್ ಆ್ಯಪ್ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಮಾಹಿತಿ ಅಪ್ಡೇಟ್ ಮಾಡುವ ಆ್ಯಪ್ ತೆರೆದುಕೊಳ್ಳುತ್ತಿಲ್ಲ. ಇದು ಗಣತಿಗೆಂದು ನೇಮಿಸಲ್ಪಟ್ಟಿರುವ ಶಿಕ್ಷಕರಿಗೂ ಕಿರಿಕಿರಿ ಆಗತೊಡಗಿದೆ.
ಉಡುಪಿ ಜಿಲ್ಲೆಯಲ್ಲಿ ಗಣತಿ ಆರಂಭಗೊಂಡು ಗುರುವಾರ(ಸೆ.25)ಕ್ಕೆ ನಾಲ್ಕು ದಿನ ಕಳೆದರೂ ಸಮೀಕ್ಷೆ ಸರಿಯಾಗಿ ಆರಂಭಗೊಂಡಿಲ್ಲ. ಸೆ.22ರಿಂದ ಅ.7ರ ವರೆಗೆ ಸಮೀಕ್ಷೆ ಪೂರ್ಣಗೊಳಿಸಲು ಗಣತಿದಾರಿಗೆ ಗಡುವು ನೀಡಲಾಗಿದೆ. ಪ್ರತಿ ಗಣತಿದಾರರಿಗೆ 150 ಮನೆಯಲ್ಲಿ ಸಮೀಕ್ಷೆ ನಡೆಸುವಂತೆ ಸೂಚಿಸಲಾಗಿದೆ. ಆದರೆ, ಸರ್ಕಾರ ನೀಡಿರುವ ಮೊಬೈಲ್ ಆ್ಯಪ್ ಕೈಕೊಟ್ಟಿದೆ. ಹೀಗಾಗಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ. ಈವರೆಗೆ ಕೇವಲ ಶೇ.5ರಷ್ಟು ಮಾತ್ರ ಸಮೀಕ್ಷೆ ಆಗಿರಬಹುದು ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮಾಹಿತಿ ನೀಡಿದೆ.
ಸಮೀಕ್ಷೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಮಾಹಿತಿ ನೀಡಲು ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಸಹಾಯವಾಣಿ ಪ್ರಾರಂಭಿಸಲಾಗಿದೆ. ರಾಜ್ಯ-8050770004, ಉಡುಪಿ ಜಿಲ್ಲಾ ದೂ.ಸಂ.- 0820-2574881. ತಾಲೂಕು ಮಟ್ಟದಲ್ಲಿ ಉಡುಪಿ, ಬ್ರಹ್ಮಾವರ ಹಾಗೂ ಕಾಪು ತಾಲೂಕಿಗೆ ಉಡುಪಿಯ ತಾಪಂ ಆವರಣದಲ್ಲಿರುವ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ದೂ.ಸಂ.- 0820-2520739, ಕುಂದಾಪುರ ಹಾಗೂ ಬೈಂದೂರು ತಾಲೂಕಿಗೆ ಕುಂದಾಪುರ ಟೌನ್ ಬಿಸಿಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಮೊ.ಸಂ.- 9972294198, ಕಾರ್ಕಳ ಹಾಗೂ ಹೆಬ್ರಿ ತಾಲೂಕಿಗೆ ಕಾರ್ಕಳದ ಕೆಇಬಿ ಸಮೀಪದ ಡಿ.ದೇವರಾಜ ಅರಸು ಭವನ ದೂ.ಸಂ.- 0825-8298610 ಸಂಪರ್ಕಿಸಬಹುದಾಗಿದೆ.
ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ನಮ್ಮ ಜವಾಬ್ದಾರಿ. ಆದರೆ, ಸರಿಯಾದ ಪೂರ್ವಸಿದ್ಧತೆ ಮಾಡಿಕೊಳ್ಳದೆ ತರಾತುರಿಯಿಂದ ಸಮೀಕ್ಷೆಗೆ ಮುಂದಾಗಿರುವುದೇ ಸಮಸ್ಯೆಗೆ ಕಾರಣವಾಗಿದೆ. ಕೊಟ್ಟಿರುವ ಮೊಬೈಲ್ ಆ್ಯಪ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗಣತಿ ಮಾಡುವ ಮನೆಗಳ ಪಟ್ಟಿಯನ್ನೂ ಸಹ ನೀಡಿಲ್ಲ. ತಾಂತ್ರಿಕ ದೋಷದ ನಡುವೆಯೂ ಜಿಲ್ಲೆಯಲ್ಲಿ ಬುಧವಾರ 679 ಮನೆಯ ಸಮೀಕ್ಷೆ ಮಾಡಿದ್ದೇವೆ. | ಅಂಪಾರು ದಿನಕರ ಶೆಟ್ಟಿ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಗ ನೀಡಿರುವ ಆ್ಯಪ್ನಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಅಪ್ಗ್ರೇಟೆಡ್ ವರ್ಶನ್ ಆ್ಯಪ್ ನೀಡಲಾಗಿದೆ. ಅಲ್ಲದೆ, ಗುರುವಾರ ಬೆಳಗ್ಗೆ 8ರಿಂದ 10 ಗಂಟೆಯವರೆಗೆ ಯುಟ್ಯೂಬ್ ಮೂಲಕ ಗಣತಿಗೆ ನೇಮಿಸಲ್ಪಟ್ಟ ಶಿಕ್ಷಕರಿಗೆ ತರಬೇತಿಯನ್ನೂ ಸಹ ನೀಡಲಾಗಿದೆ. ಸಮಸ್ಯೆ ಬಗೆಹರಿದಿದ್ದು, ನಾಳೆಯಿಂದ (ಸೆ.26) ಎಲ್ಲರೂ ಸಮೀಕ್ಷೆಯಲ್ಲಿ ತೊಡಗಲಿದ್ದಾರೆ. | ಸ್ವರೂಪಾ ಟಿ.ಕೆ. ಉಡುಪಿ ಜಿಲ್ಲಾಧಿಕಾರಿ