

ಹುಬ್ಬಳ್ಳಿ : ಇಲ್ಲಿನ ಗೋಕುಲ ರಸ್ತೆಯ ಕೆಎಲ್ಇ ತಾಂತ್ರಿಕ ಕಾಲೇಜು (ಕೆಲ್ಇಐಟಿ)ನಲ್ಲಿ ಆಯೋಜಿಸಿದ್ದ ಎರಡು ದಿನಗಳ ತಾಂತ್ರಿಕ ಉತ್ಸವ ‘ಅದ್ವಿತೀಯ-2024’ ಶನಿವಾರದಂದು ಮುಕ್ತಾಯಗೊಂಡಿತು.
ಶುಕ್ರವಾರ ಜರುಗಿದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡಿದ ಗೂಗಲ್ ಡಿಸ್ಟ್ರಿಬ್ಯೂಟೆಡ್ ಕ್ಲೌಡ್ನ ಇಂಜಿನಿಯರಿಂಗ್ ಲೀಡ್ ಇಂಜಿನಿಯರ್ ನಾಗರಾಜ ಮಠ, ಭವಿಷ್ಯದ ಇಂಜಿನಿಯರ್ಗಳನ್ನು ರೂಪಿಸುವಲ್ಲಿ ಹೊಸ ಆವಿಷ್ಕಾರಗಳ ಮಹತ್ವದ ಬಗ್ಗೆ ತಿಳಿಹೇಳಿದರು.
ಕೆಎಲ್ಇ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಶಂಕರಣ್ಣ ಮುನವಳ್ಳಿ ಮಾತನಾಡಿ, ವೇದಿಕೆಗಳನ್ನು ವಿಕಾಸಕ್ಕಾಗಿ ಬಳಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಮನು ಟಿ.ಎಂ. ಅವರು, ಉತ್ಸವವು ತಾಂತ್ರಿಕ ಕೌಶಲ್ಯಗಳನ್ನು ಸೃಜನಾತ್ಮಕತೆ ಮತ್ತು ವಾಸ್ತವ ಪ್ರಪಂಚದ ಸಮಸ್ಯೆಗಳನ್ನು ಪರಿಹರಿಸಲು ಹೇಗೆ ಒಟ್ಟುಗೂಡಿಸುವುದಕ್ಕೆ ಸಹಾಯವಾಯಿತು ಎಂಬುದನ್ನು ಹೇಳಿದರು.
ಎರಡನೇ ದಿನವಾದ ಶನಿವಾರದಂದು ವಿದ್ಯಾರ್ಥಿಗಳು ನಿರ್ಣಾಯಕ ಹಂತದ ಸ್ಪರ್ಧೆಗಳು, ಪ್ರಸ್ತುತಿಕರಣಗಳು ಮತ್ತು ತಾಂತ್ರಿಕ ಪ್ರದರ್ಶನದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಆಧುನಿಕ ಯೋಜನೆಗಳು, ಚಿಂತನೆಗೆ ಪ್ರೇರೇಪಕ ಪ್ರಬಂಧ ಪ್ರಸ್ತುತಿಕರಣಗಳು ಮತ್ತು ಚಟುವಟಿಕೆಗಳಿಂದ ವಿದ್ಯಾರ್ಥಿಗಳಿಗೆ ಅಮೂಲ್ಯ ಜ್ಞಾನ ಮತ್ತು ಅನುಭವ ದೊರೆಯಿತು.
ಅತಿಥಿಯಾಗಿದ್ದ ಬೆಳಗಾವಿ ವಿಟಿಯು ಕುಲಸಚಿವ ಡಾ. ಟಿ.ಎನ್. ಶ್ರೀನಿವಾಸ ಅವರು, ವಿದ್ಯಾರ್ಥಿಗಳ ನಾವೀನ್ಯತೆ ಮತ್ತು ಶ್ರದ್ಧೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕೆಎಲ್ಇಐಟಿ ಆಡಳಿತ ಮಂಡಳಿ ಅಧ್ಯಕ್ಷ ಎಸ್.ಸಿ. ಮೆಟ್ಗುಡ್ ಅಧ್ಯಕ್ಷತೆ ವಹಿಸಿದ್ದರು.
ಡಾ. ಶ್ರೀಧರ ಮಠದ ಸ್ವಾಗತಿಸಿದರು. ಡಾ. ಗಿರೀಶ ಉತ್ಸವದ ವರದಿ ಪ್ರಸ್ತುತಪಡಿಸಿದರು.