

ಬೆಳ್ತಂಗಡಿ: ಕೋವಿಡ್ ಸಂಘರ್ಷದಿಂದ ಮಕ್ಕಳು ತಂತ್ರಜ್ಞಾನದ ಶಿಕ್ಷಣಕ್ಕೆ ಒಗ್ಗಿಕೊಳ್ಳಬೇಕಾದ ಪರಿಸ್ಥಿತಿ ಇಂದಿನದು. ಈ ಸಮಯದಲ್ಲಿ ಅಂತರ್ಜಾಲ ಶಿಕ್ಷಣ ಪಡೆಯುವಲ್ಲಿ ಗ್ರಾಮೀಣ ಮಕ್ಕಳು ವಂಚಿತರಾಗುತ್ತಿದ್ದಾರೆ. ಇದನ್ನರಿತು ಶ್ರೀಕ್ಷೇತ್ರವು 10 ಸಾವಿರ ಲ್ಯಾಪ್ಟಾಪ್, 20 ಸಾವಿರ ಟ್ಯಾಬ್ ವಿತರಣೆಗೆ ಮುಂದಾಗಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳ ಪ್ರವಚನ ಮಂಟಪದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಲ್ಯಾಪ್ಟಾಪ್ ಹಾಗೂ ಟ್ಯಾಬ್ ವಿತರಣೆಯ ‘ಜ್ಞಾನತಾಣ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೀವನ ಅಮೂಲ್ಯವಾದುದು. ರೋಗಕ್ಕೆ ಹೆದರಿ ಮನೆಯಲ್ಲೇ ಕುಳಿತುಕೊಳ್ಳುವ ಬದಲಾಗಿ ನಮ್ಮ ಸೃಜನಶೀಲ ಉಪಕ್ರಮಗಳನ್ನು ಅನುಷ್ಠಾನಕ್ಕೆ ತಂದು ಪ್ರಯೋಗಶೀಲರಾಗಿ ಎಂದರು.
10 ಸಾವಿರ ಲ್ಯಾಪ್ಟಾಪ್ 20 ಸಾವಿರ ಟ್ಯಾಬ್ ವಿತರಣೆ: ರಾಜ್ಯದ ಸುಮಾರು ಒಂದು ಲಕ್ಷ ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣವನ್ನು ಪ್ರಸಕ್ತ ವರ್ಷ ಒದಗಿಸಲಾಗುತ್ತಿದೆ. 5ನೇ ತರಗತಿಯಿಂದ 10ನೇ ತರಗತಿವರೆಗೆ ಆರು ವರ್ಷಗಳ ಪಠ್ಯಗಳನ್ನು ಕನ್ನಡ ಮಾಧ್ಯಮದಲ್ಲಿ ತಯಾರಿಸಲಾಗಿದ್ದು, ಇದನ್ನು ಟ್ಯಾಬ್ನಲ್ಲಿ ಇಂಟರ್ನೆಟ್ ರಹಿತವಾಗಿ ಗ್ರಾಮೀಣ ವಿದ್ಯಾರ್ಥಿಗಳು ಬಳಸಬಹುದಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಅಂತರ್ಜಾಲ ಶಿಕ್ಷಣಕ್ಕೆ ಲ್ಯಾಪ್ಟಾಪ್ಗಳನ್ನು ವಿತರಿಸಲಾಗುತ್ತದೆ. ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ 21 ಕೋಟಿ ರೂ. ವೆಚ್ಚದಲ್ಲಿ ಪ್ರಥಮ ವರ್ಷ 20,000 ಟ್ಯಾಬ್ಗಳು ಹಾಗೂ 10,000 ಲ್ಯಾಪ್ಟಾಪ್ಗಳನ್ನು ಮತ್ತು 450 ಗೌರವ ಶಿಕ್ಷಕರನ್ನು ಒದಗಿಸಲಾಗುತ್ತದೆ.
ಶ್ರೀಮಂತರಿಗೆ ಮತ್ತು ಖಾಸಗಿ ಶಾಲೆಯ ಮಕ್ಕಳಿಗೆ ಮಾತ್ರ ಮೊಬೈಲ್, ಲ್ಯಾಪ್ಟಾಪ್ ಸಿಗುತ್ತದೆ ಎಂಬ ಕಲ್ಪನೆ ಇದ್ದು, ಇದನ್ನು ನಿವಾರಿಸಲು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಸರ್ಕಾರಿ ಶಾಲಾ ಮಕ್ಕಳಿಗೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಟ್ಯಾಬ್ ಮತ್ತು ಲ್ಯಾಪ್ಟಾಪ್ ನೀಡುವ ಮೂಲಕ ಎಲ್ಲ ಮಕ್ಕಳಿಗೂ ಈ ಸೌಭಾಗ್ಯ ಇದೆ ಎಂಬುದನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಡಿದೆ. - ಡಾ.ಡಿ.ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ