ಕಷ್ಟದಿಂದ ಪಾರಾಗಲು ಕೃಷಿ ಜತೆ ಉಪ ಕಸುಬು ಕೈಗೊಳ್ಳಿ

technical day
Published on

ವಿಜ್ಞಾನಿ ಡಾ.ಬಿ.ಜಿ.ಹನುಮಂತರಾಯ ಸಲಹೆ ಮೂರು ದಿನಗಳ ಕಾಲ ರೈತರಿಗೆ ಅರಿವು ಕಾರ್ಯಕ್ರಮ


ವಿಜಯವಾಣಿ ಸುದ್ದಿಜಾಲ ತೂಬಗೆರೆ
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ಕೃಷಿ ಕೈಂಕರ್ಯ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಆದಾಯ ದ್ವಿಗುಣಗೊಳಿಸಿಕೊಳ್ಳಲು ಕೃಷಿಗೆ ಪೂರಕವಾದ ಉಪಕಸುಬುಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಕೃಷಿಯನ್ನು ಉದ್ದಿಮೆಯಾಗಿ ಮಾಡಿಕೊಳ್ಳಬೇಕು ಎಂದು ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಬಿ.ಜಿ.ಹನುಮಂತರಾಯ ಹೇಳಿದರು.
ಹೋಬಳಿಯ ಹಾಡೋನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 95ನೇ ಭಾರತೀಯ ಕೃಷಿ ಅನುಸಂಧಾನ ಪರಿಷತ್‌ನ ಸಂಸ್ಥಾಪನಾ ದಿನದ ಅಂಗವಾಗಿ ಮೂರು ದಿನಗಳವರೆಗೆ ಹಮ್ಮಿಕೊಂಡಿರುವ ತಂತ್ರಜ್ಞಾನ ದಿನಾಚರಣೆಗೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.
ಭಾರತೀಯ ಕೃಷಿ ಅನುಸಂಧಾನ ಪರಿಷತ್ 16 ಜುಲೈ 1929 ರಲ್ಲಿ ಸ್ಥಾಪನೆಯಾಗಿದ್ದು, ಇದು ರೈತರ ಏಳಿಗೆ ಮತ್ತು ಉತ್ಪಾದಕತೆ ಹೆಚ್ಚಳದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಸೋಮವಾರ ಕಿರು ಧಾನ್ಯಗಳಲ್ಲಿ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಹಾಗೂ ಜು.18 ರಂದು ಟೊಮ್ಯಾಟೊ ಬೆಳೆಯಲ್ಲಿ ಸಮಗ್ರ ಪೀಡೆ ನಿರ್ವಹಣೆ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೃಷಿ ವಿಜ್ಞಾನಿ ಡಾ. ಜೆ. ವೆಂಕಟೇಗೌಡ ಮಾತನಾಡಿ, ಟ್ರ್ಯಾಕ್ಟರ್ ಚಾಲಿತ ಸಂಯುಕ್ತ ಕೂರಿಗೆ ಪದ್ಧತಿಯ ಮುಖಾಂತರ ಬಿತ್ತನೆ ಮಾಡುವುದರಿಂದ ರಾಗಿಯಲ್ಲಿ ಕಡಿಮೆ ಬಿತ್ತನೆ ಬೀಜ ಬಳಕೆಯ ಜತೆಗೆ ಬೀಜ ಮತ್ತು ರಾಸಾಯನಿಕ ಗೊಬ್ಬರ 5 ಸೆಂಮೀ ಅಂತರದಲ್ಲಿ ಮಣ್ಣಿಗೆ ಸೇರಿಸುವುದು, ಸಾಲು ಬಿತ್ತನೆ ಮಾಡುವುದರಿಂದ ಅಂತರ ಬೇಸಾಯ ಮಾಡಲು ಅನುಕೂಲವಾಗುತ್ತದೆ ಹಾಗೂ ಕೃಷಿ ಕಾರ್ಮಿಕರ ಅವಲಂಬನೆ ಶೇ. 80 ಕಡಿಮೆಗೊಳಿಸಬಹುದು ಎಂದು ತಿಳಿಸಿದರು,
ಮಣ್ಣು ವಿಜ್ಞಾನಿ ಡಾ. ಪಿ. ವೀರನಾಗಪ್ಪ ಮಾತನಾಡಿ, ರೈತರು ಬಿತ್ತನೆ ಮಾಡುವಾಗ ವಿವಿಧ ಬೆಳೆಗಳಿಗೆ ಶಿಫಾರಸು ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಅವಶ್ಯವಿದ್ದಲ್ಲಿ ಆಮ್ಲ ಮಣ್ಣಿಗೆ ಸುಣ್ಣ ಹಾಗೂ ಪೂರ್ತಿ ಪ್ರಮಾಣದ ರಂಜಕ, ಪೊಟ್ಯಾಷ್ ಮತ್ತು ಅರ್ಧದಷ್ಟು ಸಾರಜನಕದ ಜತೆಗೆ ಮುಖ್ಯ ಲಘು ಪೋಷಕಾಂಶಗಳಾದ ಸತು ಮತ್ತು ಬೋರಾನ್ ಒದಗಿಸುವುದು ಸೂಕ್ತ ಎಂದು ತಿಳಿಸಿದರು.
ಸಂಸ್ಥಾಪನಾ ದಿನದ ಅಂಗವಾಗಿ ಮೊದಲನೇ ದಿನ ಗೊಬ್ಬರ ಮತ್ತು ಬೀಜದ ಸಂಯುಕ್ತ ಕೂರಿಗೆ ಕುರಿತ ತರಬೇತಿ ಮತ್ತು ಪ್ರಾತ್ಯಕ್ಷಿಕೆ ನಡೆಯಿತು. 60 ಮಂದಿ ರೈತ ಹಾಗೂ ರೈತ ಮಹಿಳೆಯರು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net