

ಮೂಡಲಗಿ: ವಿದ್ಯಾರ್ಥಿಗಳು ರ‌್ಯಾಗಿಂಗ್ ಮಾಡುವುದು ಕಾನೂನುಬಾಹಿರ ಚಟುವಟಿಕೆಯಾಗಿದ್ದು, ಆ ಪ್ರವತ್ತಿ ಬದಲಾಗಬೇಕು. ವಿದ್ಯಾರ್ಥಿಗಳು ಅಧ್ಯಯನದ ಬದಲಾಗಿ ರ‌್ಯಾಗಿಂಗ್ ಚಟುವಟಿಕೆಯಲ್ಲಿ ತೊಡಗಿ ಸಾಮಾಜಿಕ ಅಪರಾಧ ಕತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಮೂಡಲಗಿ ಪೊಲೀಸ್ ಠಾಣೆಯ ಹಿರಿಯ ಪೇದೆ ನಾಗಪ್ಪ ಒಡೆಯರ ಹೇಳಿದರು.
ಪಟ್ಟಣದ ಆರ್‌ಡಿಎಸ್ ಕಲಾ, ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯದ ರ‌್ಯಾಗಿಂಗ್ ವಿರೋಧಿ ಘಟಕದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿದರು ವಿದ್ಯಾರ್ಥಿಗಳು ರ‌್ಯಾಗಿಂಗ್ ಪ್ರವತ್ತಿಯಿಂದ ದೂರವಿದ್ದು, ಜೀವನವನ್ನು ಗುರುವಿನ ಮಾರ್ಗದರ್ಶನದಂತೆ ರೂಪಿಸಿಕೊಳ್ಳುವುದು ಅವಶ್ಯ ಎಂದರು.
ಮಹಿಳೆಯರನ್ನು ಚುಡಾಯಿಸುವುದು, ಅಸಭ್ಯವಾಗಿ ಸಹಪಾಠಿಗಳನ್ನು ನಿಂದಿಸುವುದು ಮತ್ತು ಕಾಲೇಜಿನಲ್ಲಿ ಅಸಭ್ಯವಾಗಿ ವರ್ತಿಸುವುದನ್ನು ಮಾಡಬಾರದು ಎಂದರು. ಕಾಲೇಜಿನ ಪ್ರಾಚಾರ್ಯ ಸತ್ಯಪ್ಪ ಗೋಟೂರ ಮಾತನಾಡಿ, ರ‌್ಯಾಗಿಂಗ್ ಚಟುವಟಿಕೆ ವಿದ್ಯಾರ್ಥಿಗಳ ಬದುಕು ನಾಶಮಾಡುತ್ತಿದೆ. ಅಧ್ಯಯನ ಕಡೆ ಹೆಚ್ಚು ಗಮನ ಕೊಡಬೇಕು. ವಿದ್ಯಾರ್ಥಿಗಳು ತಿಳಿವಳಿಕೆ ಹೊಂದಿ ತಪ್ಪು ಚಟುವಟಿಕೆಗಳಿಂದ ದೂರ ಇರಬೇಕೆಂದರು.
ಕಾಲೇಜು ಉಪನ್ಯಾಸಕರಾದ ಮಲ್ಲಪ್ಪ ಪಾಟೀಲ, ಗೀತಾ ಹಿರೇಮಠ, ರೋಹಿಣಿ ಕಾಂಬಳೆ, ಸಂಜೀವ ಮಂಟೂರ, ಡಾ.ಪ್ರಶಾಂತ ಮಾವರಕರ, ಸುನೀಲ ಸತ್ತಿ, ರಶ್ಮಿ ಕಳ್ಳಿಮನಿ, ಕವಿತಾ ಸಿದ್ದಾಪುರ, ರಾಜು ಪತ್ತಾರ ಇತರರಿದ್ದರು.