ಚುಡಾಯಿಸುವವರ ಚಳಿ ಬಿಡಿಸಲು ಸಿದ್ಧತೆ

Police
ಬೆಳಗಾವಿಯ ಅಶೋಕ ನಗರದಲ್ಲಿನ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಭೇಟಿ ನೀಡಿ ಭದ್ರತೆ ಕುರಿತು ಪರಿಶೀಲಿಸಿದ ಪೊಲೀಸರು.
Published on

ಬೆಳಗಾವಿ: ಬಡವರು, ಮಧ್ಯಮ ವರ್ಗದ ಹೆಣ್ಣು ಮಕ್ಕಳ ಜ್ಞಾನದೇಗುಲಗಳಾಗಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ಗಳ ಭದ್ರತೆಗೆ ಮಹಾನಗರ ಪೊಲೀಸ್ ಆಯುಕ್ತರು ಮುಂದಾಗಿದ್ದು, ಬಾಲಕಿಯರನ್ನು ಚುಡಾಯಿಸುವವರಿಗೆ ಬುದ್ಧಿಕಲಿಸಿ ಸರಿದಾರಿಗೆ ತರಲು ಸಿಬ್ಬಂದಿ ನಿಯೋಜಿಸಲಾಗುತ್ತಿದೆ.

ಬೆಳಗಾವಿ ಮಹಾನಗರದಲ್ಲಿ ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ (ಒಬಿಸಿ), ಅಲ್ಪಸಂಖ್ಯಾತರ ಇಲಾಖೆ ಸೇರಿ ಸುಮಾರು 20ಕ್ಕೂ ಅಧಿಕ ಹಾಸ್ಟೆಲ್ಗಳಿವೆ. ಇವುಗಳ ಪೈಕಿ 5ಕ್ಕೂ ಅಧಿಕ ವಿದ್ಯಾರ್ಥಿನಿಯರ ಹಾಸ್ಟೆಲ್ಗಳಿದ್ದು, ಅವುಗಳಿಗೆ ಸೂಕ್ತ ಭದ್ರತೆ, ಸುರಕ್ಷತೆಗಾಗಿ ಪ್ರತಿ ಹಾಸ್ಟೆಲ್ ಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆಗೆ ಕ್ರಮ ವಹಿಸಿದೆ. ಹಾಸ್ಟೆಲ್ನಿಂದ ಕಾಲೇಜುಗಳಿಗೆ ಹೋಗಿ ಬರುವ ರಸ್ತೆಗಳ ಮೇಲೆ ಚನ್ನಮ್ಮ ಪಡೆ ಗಸ್ತು ನಡೆಸಲು ಕ್ರಮ ವಹಿಸಿದೆ.

ಕಳೆದ ನಾಲ್ಕೈದು ತಿಂಗಳಿನಿಂದ ನಗರದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳ ಮುಂಭಾಗ ಹಾಗೂ ಕಟ್ಟಡದ ಪಕ್ಕದಲ್ಲಿ ಬೈಕ್, ಕಾರುಗಳನ್ನು ಪಾರ್ಕಿಂಗ್ ಮಾಡುತ್ತಾರೆ. ಅಲ್ಲದೆ, ಕಾಲೇಜುಗಳಿಗೆ ಹೋಗಿರುವ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿದ್ದಾರೆ. ಕೆಲ ಕಿಡಗೇಡಿಗಳು ಕಾಲೇಜಿಂದ ಹಾಸ್ಟೆಲ್ ವರೆಗೆ ಫಾಲೋಅಪ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ಕೆಲ ವಿದ್ಯಾರ್ಥಿನಿಯರು ಹಾಸ್ಟೆಲ್ ಬಿಟ್ಟು ಹೊರಗಡೆ ಹೋಗಲು ಭಯ ಪಡಯತ್ತಿದ್ದಾರೆ. ಸಂಜೆ 6 ಗಂಟೆಯ ನಂತರ ಹಾಸ್ಟೆಲ್ಗಳ ಮುಂಭಾಗದ ರಸ್ತೆಯಲ್ಲಿ ಯುವಕರ ಗುಂಪುಗುಂಪಾಗಿ ನಿಂತುಕೊಂಡು ಗಲಾಟೆ ನಡೆಸುವುದು, ವಿದ್ಯಾರ್ಥಿನಿಯರನ್ನು ಕರೆಯುವ ಕೆಲಸ ಮಾಡುತ್ತಿದ್ದಾರೆ. ಇದು ಹಾಸ್ಟೆಲ್ಗಳ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿದ್ದು, ವಿದ್ಯಾರ್ಥಿನಿಯರ ರಕ್ಷಣೆಗಾಗಿ ಹರಸಾಹಸಪಡುತ್ತಿದ್ದಾರೆ. ಪೊಲೀಸರು ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

1,200ಕ್ಕೂ ಅಧಿಕ ವಿದ್ಯಾರ್ಥಿನಿಯರು

ಪದವಿ, ಉನ್ನತ ಪದವಿ, ಪಿಯುಸಿ, ಡಿಪ್ಲೊಮಾ ಕಲಿಯಲು ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಿಂದ ಸುಮಾರು 1,200ವಿದ್ಯಾರ್ಥಿನಿಯರು ಆಗಮಿಸಿದ್ದಾರೆ. ಅವರಲ್ಲಿ ಬಹುತೇಕರು ನಗರದ ಸಮಾಜ ಕಲ್ಯಾಣ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಇಲಾಖೆ ಸೇರಿ ವಿವಿಧ ಹಾಸ್ಟೆಲ್‌ಗಳಲ್ಲಿದ್ದಾರೆ. ಈ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡಲು ಪೊಲೀಸ್ ಆಯುಕ್ತರು ಕಟ್ಟುನಿಟ್ಟಿನ ಕ್ರಮ ವಹಿಸಿದ್ದಾರೆ.

ಬೆಳಗಾವಿ ನಗರದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳ ಮುಂಭಾಗದಲ್ಲಿ ವಾಹನ ಪಾರ್ಕಿಂಗ್ ಮಾಡಿ ವಿದ್ಯಾರ್ಥಿನಿಯರನ್ನು ಚುಡಾಯಿಸುತ್ತಿರುವವರ ವಿರುದ್ಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಮೂರು ಬೈಕ್ ಸಮೇತ ಕಿಡಿಗೇಡಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಅವಶ್ಯಕತೆ ಬಿದ್ದರೆ ಎಲ್ಲ ವಿದ್ಯಾರ್ಥಿನಿಯರ ಹಾಸ್ಟೆಲ್‌ಗಳಿಗೆ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗುವುದು.| ಎಸ್.ಎನ್.ಸಿದ್ದರಾಮಪ್ಪ ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net