ರೈತರ ಪಾಲಿಗೆ ಕಣ್ಣೀರಾದ ಈರುಳ್ಳಿ

27 BIRUR 01
ಬೀರೂರಿನ ಎರೆ ಬಯಲಿನಲ್ಲಿ ಈರುಳ್ಳಿ ಸಲು ಕೈಸೇರುವ ಹಂತದಲ್ಲಿ ಒಣಗುತ್ತಿರುವುದು.
Published on

ಬೀರೂರು: ಅನಾವೃಷ್ಟಿಯಿಂದ ಜಿಲ್ಲೆಯ ಬೀರೂರು, ಅಜ್ಜಂಪುರ ಹಾಗೂ ಶಿವನಿ ಭಾಗದ ಈರುಳ್ಳಿ ಬೆಳೆಗಾರರು ಬೆಳೆದ ಬೆಳೆ ಕೆ ಸೇರದೆ ಕಂಗಾಲಾಗಿದ್ದಾರೆ. ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿರುವುದರಿಂದ ಕೆಲವಡೆ ಬೆಳೆ ಸಂಪೂರ್ಣ ನಾಶವಾಗಿದೆ. ಉಳಿದ ಅಲ್ಪಸ್ವಲ್ಪ ಬೆಳೆಯನ್ನು ಸ್ವತಃ ರೈತರೇ ನಾಶಪಡಿಸಲು ಮುಂದಗಿದ್ದಾರೆ.
ಬೀರೂರು ಭಾಗದ ಮುದ್ದಾಪುರ ಗ್ರಾಮ ಈರುಳ್ಳಿ ಬೆಳೆಗೆ ಮೀಸಲಾಗಿದ್ದು, ಮಳೆಯನ್ನು ಆಶ್ರಯಿಸಿ ಈ ಭಾಗದ ರೈತರು ಒಟ್ಟು 450 ಹೆಕ್ಟೇರ್‌ನಷ್ಟು ಕೃಷಿ ಭೂಮಿಯಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದರು. ಮಳೆ ಕೈಕೊಟ್ಟಿದ್ದರಿಂದ ಕೆಲ ಬೆಳೆಗಾರರು ಅಕ್ಕ ಪಕ್ಕದ ಬೋರ್‌ವೆಲ್ ಮಾಲೀಕರಿಗೆ ಒಂದು ಹದ ನೀರಿಗೆ 4 ಸಾವಿರ ದಂತೆ ಹಣ ನೀಡಿ ನೀರು ಹಾಯಿಸಿದ್ದಾರೆ. ಉಳಿದ ಬೆಳೆಗಾರರು ಮಳೆಯನ್ನೇ ಆಶ್ರಯಿಸಿರುವುದರಿಂದ ನೀರಿಲ್ಲದೆ ಈರುಳ್ಳಿ ತೊಂಡೆ ಒಣಗಿ ಮುರಿದು ಬೀಳುತ್ತಿದೆ. ಇದರಿಂದ ಬೆಳೆ ನಷ್ಟವಾಗಿ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಹಿಂಗಾರು ಹಂಗಾಮಿನಲ್ಲಿ ಜೋಳ, ಕಡಲೆ ಬಿತ್ತನೆ ಮಾಡುವ ರೈತರು ಮುಂಗಾರು ಬೆಳೆ ಕೈಹಿಡಿಯಲಿ ಎನ್ನುವ ನಿರೀಕ್ಷೆಯಲ್ಲಿ ಪ್ರತಿ ವರ್ಷ ನಷ್ಟ ಅನುಭವಿಸಿದರೂ ಸಾಂಪ್ರದಾಯಿಕ ಬೆಳೆ ಬೆಳೆಯುವ ಪದ್ದತಿಯನ್ನು ಕೈ ಬಿಟ್ಟಿಲ್ಲ.
ಒಂದಲ್ಲ ಒಂದು ರೀತಿ ಈ ಬಾರಿ ಈರುಳ್ಳಿ ರೈತರ ಪಾಲಿಗೆ ಕಣ್ಣೀರುಳ್ಳಿಯಾಗುವ ಲಕ್ಷಣ ಗೋಚರಿಸುತ್ತಿದೆ. ಮಳೆ ಕಣ್ಮರೆಯಾಗಿದ್ದರಿಂದ ಶ್ರಮಪಟ್ಟು ಬೆಳೆದ ಬೆಳೆ ನಶಿಸುವ ಹಂತ ತಲುಪಿದೆ. ಇರುವ ಅಲ್ಪಸ್ವಲ್ಪ ಈರುಳ್ಳಿ ಸಲು ಕೈ ಸೇರಿದ ಮೇಲೂ ಅದನ್ನು ಕಟಾವು ಮಾಡುವುದು, ಪ್ಯಾಕೆಟ್ ಮಾಡಿ ಹೊಲದಿಂದ ತಂದು ಮಾರುವ ವರೆಗಿನ ಖರ್ಚು ಕೈಸೇರಿರುವುದು ಅನುಮಾನವಾಗಿದೆ. ಈ ಬಾರಿ ಉತ್ತಮ ದರವಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಇಲ್ಲವಾಗಿದೆ.
ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳು ಬೆಳೆ ನಾಶದ ಬಗ್ಗೆ ವರದಿಯನ್ನು ಸಂಗ್ರಹಿಸಿದ್ದು, ಸರ್ಕಾರ ಶೀಘ್ರವಾಗಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಪ್ರತಿ ವರ್ಷ ಈರುಳ್ಳಿ ಬೆಳೆ ನಂಬಿದ ಹಲವಾರು ರೈತರಿಗೆ ಪ್ರತಿ ವರ್ಷವೂ ಕಣ್ಣೀರು ತರಿಸತ್ತಲೇ ಇದ್ದು, ಈರುಳ್ಳಿ ಬೆಳೆದ ರೈತರು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಹರ ಸಾಹಸ ಮಾಡುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net