

ಕೆ.ಆರ್.ನಗರ: ಪಟ್ಟಣದ ಹೊರವಲಯದ ಕಾಳೇನಹಳ್ಳಿ ಗ್ರಾಮದ ಸರ್ವೇ ನಂ.265ರಲ್ಲಿ ಪೌರಕಾರ್ಮಿಕರು ವಾಸಿಸುತ್ತಿರುವ ವಿವಾದಿತ ಜಾಗಕ್ಕೆ ಗುರುವಾರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಚ್.ಎಲ್.ಶಂಕರ್‌ಮೂರ್ತಿ ಮತ್ತು ರಾಜ್ಯ ಸಪಾಯಿ ಕರ್ಮಚಾರಿ ಮೇಲುಸ್ತುವಾರಿ ಸದಸ್ಯ ಡಿ.ಆರ್.ರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿತು.
ತಹಸೀಲ್ದಾರ್ ಜಿ.ಸುರೇಂದ್ರ ಮೂರ್ತಿ, ತಾಪಂ ಇಒ ಕುಲದೀಪ್ ತಂಡದಲ್ಲಿದ್ದರು. ಈ ಸಂದರ್ಭದಲ್ಲಿ ತಮ್ಮ ಅಳಲು ತೋಡಿಕೊಂಡ ಸ್ಥಳೀಯ ನಿವಾಸಿಗಳು, ನಾವು ತಲೆಮಾರುಗಳಿಂದ ಈ ಜಾಗದಲ್ಲೇ ವಾಸವಾಗಿದ್ದರು ಸರ್ಕಾರದಿಂದ ಯಾವುದೇ ದಾಖಲೆ ಸಿಕ್ಕಿಲ್ಲ. ಇದರಿಂದ ಸೌಲಭ್ಯಗಳು ದೊರೆಯದೆ ತೊಂದರೆಯಾಗಿದೆ. ಅಲ್ಲದೆ ಈಗ ಖಾಸಗಿ ವ್ಯಕ್ತಿಯೊಬ್ಬರು ಈ ಜಾಗವನ್ನು ಖರೀದಿಸಿದ್ದಾರೆ. ಜತೆಗೆ ನಮಗೆ ಈ ಸ್ಥಳಕ್ಕೆ ಪರ್ಯಾಯವಾಗಿ ಸರ್ಕಾರ ಕೊಡಲು ಹೊರಟಿರುವ ಬದಲಿ ಸ್ಥಳ ವಾಸಕ್ಕೆ ಯೋಗ್ಯವಾಗಿಲ್ಲ. ಆದ್ದರಿಂದ ನಾವು ಅಲ್ಲಿಗೆ ಹೋಗುವುದಿಲ್ಲ. ನಮಗೆ ಇಲ್ಲೇ ಇರುವಂತೆ ಅವಕಾಶ ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿದರು.
ಈ ವೇಳೆ ರಾಜ್ಯ ಸಪಾಯಿ ಕರ್ಮಚಾರಿ ಮೇಲುಸ್ತುವಾರಿ ಸದಸ್ಯ ಡಿ.ಆರ್.ರಾಜು ಮಾತನಾಡಿ, ಇಲ್ಲಿನ ನಿವಾಸಿಗಳೆಲ್ಲಾ ಸ್ವಚ್ಛತಾ ಸೇನಾನಿಗಳಾಗಿದ್ದು, ಪೌರಕಾರ್ಮಿಕ ವೃತ್ತಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಮಂಜೂರು ಮಾಡಿರುವ ಜಾಗ ಇದಾಗಿದೆ. ಆದರೂ ಇವರಿಗೆ ಯಾವುದೇ ದಾಖಲೆಗಳು ಇಲ್ಲ. ಇದರಿಂದ ಸರ್ಕಾರದ ಸವಲತ್ತುಗಳನ್ನು ಪಡೆಯಲು ವಿಫಲರಾಗಿದ್ದಾರೆ ಎಂದರು.
ಈಗ ಈ ಜಾಗ ಖಾಸಗಿ ವ್ಯಕ್ತಿಯೊಬ್ಬರು ಹೆಸರಿನಲ್ಲಿದೆ. ಇಲ್ಲಿ ನಿವೇಶನಗಳನ್ನು ಅಭಿವೃದ್ಧಿ ಪಡಿಸಲು ಮುಂದಾಗಿದ್ದು, ಹಿಂದಿನ ಶಾಸಕರ ನೇತೃತ್ವದಲ್ಲಿ ಕೆಲವು ವರ್ಷಗಳ ಹಿಂದೆ ಇವರನ್ನು ಸ್ಥಳಾಂತರಿಸಲು ಸರ್ಕಾರಿ ಜಾಗ ಗುರುತಿಸಲಾಗಿದೆ. ಆದರೆ ಆ ಸ್ಥಳ ವಾಸಸ್ಥಳ ಯೋಗ್ಯವಲ್ಲದ ಕಾರಣ ಹಾಗೂ ಇಲ್ಲಿನ ನಿವಾಸಿಗಳು ತಮ್ಮ ಪೂರ್ವಜರು ಬದುಕಿ ಬಾಳಿದ ಈ ಸ್ಥಳ ಬಿಡಲು ಒಪ್ಪುತ್ತಿಲ್ಲ. ಆದ್ದರಿಂದ ಇವರಿಗೆ ಇಲ್ಲೇ ಉಳಿಯಲು ಅವಕಾಶ ಮಾಡಿಕೊಡಬೇಕಿದೆ. ಜತೆಗೆ ಸರ್ಕಾರವೇ ಖಾಸಗಿ ವ್ಯಕ್ತಿಯಿಂದ ಜಾಗ ತೆಗೆದುಕೊಂಡು ಸ್ಥಳೀಯರಿಗೆ ಅಧಿಕೃತವಾಗಿ ನೀಡಬೇಕು ಎಂದು ಹೇಳಿದರು.
ಈ ಸಂಬಂಧ ಸ್ಥಳದಲ್ಲಿದ್ದ ಎಲ್ಲ ಅಧಿಕಾರಿಗಳು ಮತ್ತು ಮುಖಂಡರು ಚರ್ಚಿಸಿದರು. ಜತೆಗೆ ಸ್ಥಳದಲ್ಲಿದ್ದ ಜಮೀನಿನ ಮಾಲೀಕ ಮುಕುಂದರಾವ್ ಮಾತನಾಡಿ, ಪೌರಕಾರ್ಮಿಕರು ವಾಸವಾಗಿರುವಷ್ಟು ಸ್ಥಳವನ್ನು ನಾನು ಬಿಟ್ಟುಕೊಡಲು ಬದ್ಧನಾಗಿದ್ದೇನೆ. ಅಧಿಕಾರಿಗಳು ಅಧಿಕೃತವಾಗಿ ಜಾಗದ ಸರ್ವೇ ಮಾಡಿಸಿಕೊಡಬೇಕು. ಅಲ್ಲದೆ ನಾನು ಬಿಟ್ಟುಕೊಡುವ ಜಾಗಕ್ಕೆ ಪರ್ಯಾಯಾವಾಗಿ ನಿಯಮಾನುಸಾರ ಸರ್ಕಾರದಿಂದ ಪರಿಹಾರ ಕೊಡಿಸಿಕೊಡಬೇಕು ಎಂದು ಕೋರಿದರು.
ಇದಕ್ಕೆ ಸಭೆಯಲ್ಲಿದ್ದ ಎಲ್ಲರೂ ಒಪ್ಪಿಗೆ ಸೂಚಿಸಿ ಸ್ಥಳದಲ್ಲಿದ್ದ ಡೋರ‌್ನಹಳ್ಳಿ ಪಿಡಿಒ ಎಸ್.ಜೆ.ರಮೇಶ್, ಅಲ್ಲಿದ್ದ ಅಧಿಕಾರಿಗಳು, ಮುಖಂಡರು ಹಾಗೂ ಗ್ರಾಮಸ್ಥರ ಒಪ್ಪಿಗೆಯ ಸಭಾ ನಡಾವಳಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಕೆ.ಪಿ.ಪ್ರಭುಶಂಕರ್, ಮಿಕ್ಸರ್ ಶಂಕರ್, ಆದಿದ್ರಾವಿಡ ಸಮಾಜದ ಅಧ್ಯಕ್ಷ ಶಿವು ಶ್ರೀನಿವಾಸ್, ಉನ್ನತ ಸಮಿತಿ ಅಧ್ಯಕ್ಷ ಬ್ಯಾಂಕ್ ರಂಗಣ್ಣ, ಸಲಹೆಗಾರರಾದ ಸಿ.ಆರ್.ವಿಜಯ್, ಆರ್.ಜಿ.ಮಹದೇವ್, ಗೌರವಾಧ್ಯಕ್ಷ ಪಿ.ಮಂಜುನಾಥ್, ಮಂಚಯ್ಯ, ದಿನೇಶ್‌ಕುಮಾರ್, ಗ್ರಾಮದ ಮುಖಂಡರಾದ ರಾಮಯ್ಯ, ಮಹದೇವಿ, ಗೌರಮ್ಮ, ಬೋರಯ್ಯ, ಮಹದೇವ, ಜಯಮ್ಮ ಇತರರು ಇದ್ದರು.